Showing posts with label "Ambalapadi Narayana Acharya". Show all posts
Showing posts with label "Ambalapadi Narayana Acharya". Show all posts

Saturday, September 05, 2026

Tribute to Prof. A Narayana Acharya

 ಪ್ರೊಫೆಸರ್ ಅಂಬಲಪಾಡಿ ನಾರಾಯಣ ಆಚಾರ್ಯರ ನೆನೆಯುತ್ತ .. 




ಪ್ರೊಫೆಸರ್ ನಾರಾಯಣ ಆಚಾರ್ಯರನ್ನು ನಾನು ಮೊದಲು ನೋಡಿದ್ದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಬಿ ಎಸ್ ಸಿ ವ್ಯಾಸಂಗಕ್ಕೆ ಸೇರಿದ ಮೊದಲ ದಿನ. ಅಂದು ಕ್ಲಾಸಿಗಾಗಿ ಬಸ್ಸಿನಲ್ಲಿ ಹೊರಟು ಶಾಸ್ತ್ರೀ ಪಾರ್ಕಿನಲ್ಲಿ ಇಳಿದು ಕಾಲೇಜಿನ ಕಡೆಗೆ ಹೊರಟರೆ ವಿದ್ಯಾರ್ಥಿಗಳೆಲ್ಲ ದಾರಿಯಲ್ಲೇ ನಿಂತುದು ಕಂಡಿತು. ಕೇಳಿದರೆ ಗೇಟಿಗೆ ಬೀಗ ಹಾಕಿದ್ದಾರೆ ಯಾವುದೋ ಹುಡುಗರ ಗುಂಪು ಎಂದು ತಿಳಿಯಿತು. ಅಷ್ಟರಲ್ಲೇ ಇನ್ನೊಂದು ಗುಂಪು ಬಂದು ಗೇಟನ್ನು ಅನಾಮತ್ತಾಗಿ ಎತ್ತಿ ಹಾಕಿ ಒಳ ಹೊರಡಲು ಬೀಗ ಹಾಕಿದ ಗುಂಪು ಅವರ ಮೇಲೆರಗಿ ಹೊಡೆದಾಟವಾಗಿ ಬಳಿಕ ಎಲ್ಲರೂ  ಚದುರಿದರು. ಅದಾದ ಒಂದೆರಡು ನಿಮಿಷಗಳಲ್ಲೇ ಪೊಲೀಸ್ ಜೀಪ್   ಬಂದು ಒಳ ಹೋಗಿ ಒಬ್ಬರನ್ನು ಕರೆದುಕೊಂಡು ಬಂದಿತು. ಬಕ್ಕ ತಲೆಯ ಕನ್ನಡಕ ಧರಿಸಿದ ಗಂಭೀರ ವದನದ ಆ ವ್ಯಕ್ತಿ ಜೀಪಿನಿಂದ ಹೊರಬಂದು  ಹೊರಗಿರುವ  ವಿದ್ಯಾರ್ಥಿಗಳಿಗೆ ಕಾಲೇಜಿನ ಒಳಗೆ ಹೋಗಲು ಸನ್ನೆ ಮಾಡಿದರು. ಆಗಲೇ ತಿಳಿಯಿತು ಅವರು ಪ್ರಿನ್ಸಿಪಾಲ್  ಅಂಬಲಪಾಡಿ ನಾರಾಯಣ ಆಚಾರ್ಯರೆಂದು. ಈ ಹೊಡೆದಾಟ ನೋಡಿದ ನನ್ನ ಗೆಳೆಯ ಕಾಲೇಜಿನ ಒಳ ಹೋದ ಮೇಲೆ ಮತ್ತೆ ಗಲಾಟೆಯಾದರೆ ಎಂದು ಭಯಪಟ್ಟು ನಾವು ಮನೆಗೆ ವಾಪಾಸು ಹೋಗೋಣ ಎಂದಾಗ ಮನೆಗೆ ಮರಳಿದ್ದೆ.

ಮಾರನೇ ದಿನ ಪ್ರಿನ್ಸಿಪಾಲರು ಮಹತ್ವದ ನಿರ್ಧಾರ ಪ್ರಕಟಿಸಿದ್ದರು - ವಿದ್ಯಾರ್ಥಿ ಸಂಘದ ಚುನಾವಣೆ ರದ್ದು ಪಡಿಸಿರುವುದಾಗಿ. ಆ ಕಾಲೇಜಿನಲ್ಲಿ ಈ ಚುನಾವಣೆ ಸಂಬಂಧವಾಗಿಯೇ ಪ್ರತೀ ವರ್ಷ ಘರ್ಷಣೆಗಳು ಸಂಭವಿಸುತ್ತಿದ್ದವು. 

ಮುಂದೆ ಕ್ಲಾಸಿನಲ್ಲಿ ಗಣಿತ ಪಾಠ ಮಾಡಲು ಬಂದ ಪ್ರೊಫೆಸರ್ ನಾರಾಯಣ ಆಚಾರ್ಯರು  ಕ್ಲಾಸ್ ರೂಮಿನೊಳಗೆ ಶಿಸ್ತಿನ ಭಯ ಹುಟ್ಟಿಸುವ  ಪ್ರಿನ್ಸಿಪಾಲ ನಾರಾಯಣ ಆಚಾರ್ಯರ ಮುಖವಾಡದಿಂದ ಹೊರಬಂದವರಂತೆ ನಮಗೆ ಕಾಣಲಾರಂಭಿಸಿದರು. ಬರೀ ಚಾಕ್ ಪೀಸ್ ಮತ್ತು ಡಸ್ಟರ್ ಹಿಡಿದುಕೊಂಡು ಬಂದು ಯಾವುದೇ ನೋಟ್ಬುಕ್ ಮತ್ತು ಟೆಕ್ಸ್ಟ್ ಬುಕ್ ಸಹಾಯವಿಲ್ಲದೆ ನಿರರ್ಗಳವಾಗಿ  ಪಾಠ ಮಾಡಲು ಹೊರಟರೆ ಅವರೊಬ್ಬ ಜಾದೂಗಾರರಂತೆ ಕಾಣುತ್ತಿದ್ದರು ನಮಗೆ. ಪುಂಖಾನುಪುಂಖವಾಗಿ ಸಾಲು ಸಾಲು ಥಿಯರಂಗಳನ್ನು ಮಂಡಿಸುತ್ತಾ  ಅವುಗಳ ಪ್ರೂಫ್  ಗಳನ್ನು ಲೀಲಾಜಾಲವಾಗಿ ಬಿಡಿಸುತ್ತ ವರ್ಣಿಸುತ್ತ  ಹೋಗುವ ಬಗೆ ನಮಗೆ ಬೆರಗು ತರಿಸುತ್ತಿತ್ತು. ಕೆಲವೊಮ್ಮೆ ಯಾವುದೋ  ಥಿಯರಂನ ಪ್ರೂಫ್ ಅರ್ಧ ಮುಗಿಯುವಾಗ ಪಿರಿಯಡ್ ಮುಗಿವ  ಬೆಲ್ಲು ಹೊಡೆದು ಮಧ್ಯದಲ್ಲಿ ಬಿಟ್ಟು ಹೋದರೆ, ಮರುದಿನದ  ಕ್ಲಾಸಿನಲ್ಲಿ  ಆ ಅರ್ಧ ಪ್ರೂಫನ್ನು ಮುಂದುವರಿಸುವಂತೆ ನಾವು ಕೇಳಿಕೊಂಡರೆ ಅವರಿಗೆ ಇನ್ನೇನೋ ಹೊಳೆದು, ಇಂದು ಅದಕ್ಕೆ ಬೇರೆಯಾದ ಪ್ರೂಫ್ ಕೊಡುತ್ತೇನೆ ಎನ್ನುತ್ತಿದ್ದದ್ದೂ ಉಂಟು! ಅವರ ತಲೆಯೊಳಗೆ ಹೊಳೆಯುವ ಹೊಸ ಹೊಸ  ಹೊಳಹುಗಳು ನಮಗೆ ಅಚ್ಚರಿಯುಂಟು ಮಾಡುತ್ತಿದ್ದವು. 

ಗಣಿತಶಾಸ್ತ್ರ ಉಳಿದ ವಿಷಯಗಳಿಗಿಂತ ಭಿನ್ನ. ಇದು ಮನುಷ್ಯ ತನ್ನ ಮೆದುಳಿನಲ್ಲಿಯೇ ಬೆಳೆಸಿಕೊಂಡು ಬಂದ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಗಳ ಹಾಗೆ ಹೊರಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರದ ಶಾಸ್ತ್ರ ಎನ್ನುತ್ತಿದ್ದರು. ಗಣಿತ ಶಾಸ್ತ್ರ ಮೆದುಳಿಗೆ ಕೆಲಸ ಕೊಡುವ ಮನಸಿಗೆ ಮುದ ಕೊಡುವ ಶಾಸ್ತ್ರ ಎನ್ನುತ್ತಿದ್ದರು. ಅದರಲ್ಲಿರುವ ವಿವಿಧ ಬಗೆಯ ಪರಿಕಲ್ಪನೆಗಳನ್ನು ಒಗಟುಗಳನ್ನು ಅರ್ಥಮಾಡಿಕೊಳ್ಳುತ್ತ ಹೋದಂತೆ ಸವಿಯೂಟದಂತೆ ಸಂಭ್ರಮಿಸಬಹುದು ಎನ್ನುತ್ತಿದ್ದರು. ಗಣಿತ ಜಗತ್ತಿನ ಕೌತುಕಗಳನ್ನು ಅರ್ಥಮಾಡಿಕೊಳ್ಳುತ್ತ, ಅದು ಒಡ್ಡುವ ಸಮಸ್ಯೆಗಳನ್ನು ಪರಿಹರಿಸುತ್ತ ಕೂತರೆ ಹೊತ್ತುಕಳೆಯುವುದು ತಿಳಿಯದು, ಆ ಲೋಕದ ಆಳಕ್ಕೆ ಇಳಿದು ಆಸ್ವಾದಿಸುತ್ತ ಹೋದರೆ ನಿಮ್ಮ ಜೀವಮಾನದುದ್ದಕ್ಕೂ ಮೆಲಕು ಹಾಕುವಷ್ಟು ಸವಿಯ ಭಂಡಾರ ನಿಮ್ಮಲ್ಲಿರುತ್ತದೆ ಎನ್ನುತ್ತಿದ್ದರು.  ಗಣಿತದ ಸರಳ ಪರಿಕಲ್ಪನೆಗಳಿಂದ ಆರಂಭಿಸಿ ನಾವು ಹೇಗೆ ಸಂಕೀರ್ಣ ಪರಿಕಲ್ಪನೆಗಳನ್ನು ಕಟ್ಟುತ್ತ ಹೋಗಬಹುದೆಂದು   ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರುವ ಹಾಗೆ ತಿಳಿಸಿ ಹೇಳುತ್ತಿದ್ದರು. ಇನ್ಫಿನಿಟಿ-ಯ ಅಗಾಧತೆಯನ್ನು ಅವರು ನಮ್ಮ ಊಹಾತ್ಮಕ ಲೋಕದೊಳಗೆ ಬೆಳೆಸಿಕೊಳ್ಳಲು ಕಟ್ಟಿಕೊಡುತ್ತಿದ್ದ ತಳಪಾಯ ಅನನ್ಯವಾದದ್ದು. ಕರಿಹಲಗೆಯ ಮೇಲೆ ಎರಡು ಬಿಂದುಗಳನ್ನು ಗುರುತು ಮಾಡಿಕೊಂಡು ನೀವು ಅರ್ಧ ಮಾಡುತ್ತ ಬಿಂದುಗಳನ್ನು ಗುರುತು ಮಾಡುತ್ತ ಹೋದಂತೆ ಅದಕ್ಕೆ ಕೊನೆಯಿಲ್ಲದಂತೆ ಸಾಗುವುದಲ್ಲವೇ? ಅದನ್ನೇ ಅಪರಿಮಿತ (infinite) ಎಂಬುವುದನ್ನು   ಬರೆಯುತ್ತ  ತೋರಿಸಿಕೊಡುತ್ತಿದ್ದರು.

ಈಗಿನಂತೆ ಕಂಪ್ಯೂಟರ್ ಮತ್ತು Visualisation ಪರಿಕರಗಳಿರದ ಕಾಲದಲ್ಲಿ ಅವರು ನಮಗೆ 3ಡಿ ಜಾಮಿಟ್ರಿ ಯ ಪರಿಕಲ್ಪನೆಗಳನ್ನು, ಥಿಯರಂ-ಗಳನ್ನು  ರೂಮ್ ನ ಉದ್ದಗಲಕ್ಕೂ ಸುತ್ತಾಡುತ್ತ, ನರ್ತಿಸುತ್ತ  ನಮಗೆ ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದರು. Perspective ಬಗ್ಗೆ  ವಿವರಿಸುತ್ತಾ ವಿಭಿನ್ನ ದ್ರಷ್ಟಿಕೋನಗಳ ಚೆಲುವನ್ನು ವರ್ಣಿಸುತ್ತಿದ್ದರು.

ಕೆಲವೊಮ್ಮೆ ನಮ್ಮ ಜ್ಞಾನಮಟ್ಟವನ್ನು ಕಂಡು ಖಿನ್ನರಾಗುತ್ತಾ 'ಇಷ್ಟು ವರ್ಷ ಏನು ಕಲಿತು ಬಂದಿರಿ?' ಎಂದು ಕೇಳುತ್ತಾ 'ದೇವ ರಕ್ಷಿಸು ನಮ್ಮನನವರತ' ಎಂದು ಉದ್ಗರಿಸುತ್ತಿದ್ದುದೂ ಉಂಟು! ಹಾಗಂತ ಅವರು ಕೈಚೆಲ್ಲಿ ಕೂರುತ್ತಿರಲಿಲ್ಲ. ಮತ್ತೆ ಸರಳ ಪರಿಕಲ್ಪನೆಗಳಿಂದಾರಂಭಿಸಿ ಹಂತ ಹಂತವಾಗಿ (ಹಿಂದಿನ ವರ್ಷಗಳಲ್ಲಿ ನಾವು ಕಲಿತಿರಬೇಕಾಗಿದ್ದ ವಿಷಯಗಳನ್ನು ) ಹೇಳಿಕೊಡುತ್ತ ಮನದಟ್ಟು ಮಾಡುತ್ತಿದ್ದರು. ಡಿಗ್ರಿಯ ಕೊನೆಯ  ವರ್ಷದಲ್ಲಿ ನಮಗೆ ರಿಯಲ್ ಅನಾಲಿಸಿಸ್ ಮತ್ತು ಟೊಪಾಲಜಿ ಎಂಬ ವಿಷಯ ಪಾಠ ಮಾಡುವಾಗ ಆಲ್ಜೀಬ್ರಾ ದ ಹಲವು ಪರಿಕಲ್ಪನೆಗಳು ನಮಗೆ ಅರ್ಥವಾಗಿಲ್ಲದ್ದನ್ನು ಕಂಡು ಅವನ್ನೆಲ್ಲವನ್ನೂ ಸಾದ್ಯಂತವಾಗಿ ಮನದಟ್ಟು ಮಾಡಿಸಿದರು. ಬಳಿಕ ರಿಯಲ್ ಅನಾಲಿಸಿಸ್ ಮತ್ತು ಟೊಪಾಲಜಿ ನಮಗೆ ಅರ್ಥವಾಗತೊಡಗಿ, ಅದು ಖುಷಿಕೊಟ್ಟಿತು.

ಈ ಯೂನಿವರ್ಸಿಟಿ ಯವರು ಸಿಲೆಬಸ್ ಕೊಟ್ಟು ನಮ್ಮ ಕೈಯನ್ನು ಕಟ್ಟಿಹಾಕಿಬಿಡುತ್ತಾರೆ! ಇಲ್ಲದಿದ್ದರೆ, ನಮಗೆ ಸ್ವಾತಂತ್ರ್ಯ ಕೊಟ್ಟಿದ್ದರೆ ನಿಮ್ಮನ್ನು ಮ್ಯಾಥೆಮ್ಯಾಟಿಷಿಯನ್ ಆಗಿ ಮಾಡುತ್ತಿದ್ದೆ ಎನ್ನುತ್ತಿದ್ದರು!

ಉತ್ತಮ ವಿಜ್ಞಾನಿಯಾಗಲು ನೀವು ಉತ್ತಮ ಗಣಿತಶಾಸ್ತ್ರ ಪರಿಣತರಾಗಬೇಕು ಎನ್ನುತ್ತಿದ್ದರು. 

ಕೆಲವೊಮ್ಮೆ ವಾರಾಂತ್ಯಕ್ಕೂ ಸ್ಪೆಷಲ್ ಕ್ಲಾಸ್ ಗೆ ಕರೆಯುತ್ತಿದ್ದರು. ನಾವು ಹುಡುಗರು 'ಸರ್, ಭಾನುವಾರ ಬಸ್ಸಿನವರು ವಿದ್ಯಾರ್ಥಿಗಳ   ರಿಯಾಯಿತಿ  ಟಿಕೇಟ್ ಕೊಡುವುದಿಲ್ಲ' ಎಂದು ಗೊಣಗಾಡಿದಾಗ ಅವರು - ನನ್ನ ಕ್ಲಾಸ್ ನಿಮ್ಮ ಬಸ್ ಟಿಕೇಟ್ ದುಡ್ಡಿಗಿಂತ ಹೆಚ್ಚು ಬೆಲೆ ಬಾಳುವಂತಾದ್ದೆಂದು  - ಗದರಿಸಿದ್ದರು! (ಕತ್ತೆ ಗೆ ಗೊತ್ತೇ ಹೊತ್ತ ಕತ್ತುರಿಯ ಪರಿಮಳ ಎಂಬವುವರಲ್ಲವೇ! )

ಒಮ್ಮೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿಜ್ಞಾನದ ವಿಷಯಗಳ ಬಗ್ಗೆ ಸೆಮಿನಾರ್ ಇರುವುದಾಗಿಯೂ ನಮ್ಮ ಕಾಲೇಜಿನಿಂದ ಇಬ್ಬರನ್ನಾದರೂ ಕಳಿಸಬೇಕಾಗಿದೆಯೆಂದೂ, ಒಂದು ಕೆಮಿಸ್ಟ್ರಿ ವಿಷಯದ ಬಗ್ಗೆ, ಒಂದು ಗಣಿತದ ವಿಷಯದ ಬಗ್ಗೆ  ಎಂದು ನನ್ನನ್ನು ಮತ್ತು ನನ್ನ ಸಹಪಾಠಿಯೊಬ್ಬಳನ್ನು ಆಚಾರ್ಯರು ಕರೆದರು. ಗಣಿತದ ವಿಷಯವನ್ನು ತಾನು ಬರೆದು ಕೊಡುವುದಾಗಿ ಹೇಳಿದರು. ಕೂಡಲೇ ನಾನು ಗಣಿತದ ವಿಷಯದ ಪ್ರತಿನಿಧಿಯಾಗಲು ಒಪ್ಪಿಕೊಂಡೆ. ಅದೊಂದು ವಿಶಿಷ್ಟವಾದ ಗಣಿತ ಥಿಯರಂ ನ ಭೂಗೋಳದ ವಿಷಯಕ್ಕೆ ಅನ್ವಯಿಸುವ ಪ್ರಬಂಧವಾಗಿತ್ತು. ನಾನೊಂದು ಭಾರತದ ಭೂಪಟದ ಚಿತ್ರವನ್ನು ಭಾರತದೊಳಗಿನ ಯಾವುದಾದರೂ ಜಾಗದಲ್ಲಿ ನೆಲದ ಮೇಲೆ ಇಟ್ಟರೆ ಆ ಚಿತ್ರದೊಳಗಿನ ಒಂದು ಬಿಂದು ಮಾತ್ರ  ಅದು ಪ್ರತಿನಿಥಿಸುವ  ಅದರ ಕೆಳಗಿನ ನೆಲದ ಮೇಲಿನ ಒಂದು ಬಿಂದುವಿನ ಮೇಲೆ ಕೂತಿರುತ್ತದೆ ಎನ್ನುವುದು ಆ ಪ್ರಬಂಧ ಪ್ರಸ್ತುತ ಪಡಿಸುವ  ನಿಜಾಂಶ (ಫ್ಯಾಕ್ಟ್).

ಭಾರತದ ನಕ್ಷೆ ಎನ್ನುವುದು  ಭಾರತದ ನೆಲದ ಮೇಲಿನ ಪ್ರತಿಯೊಂದು ಬಿಂದುವನ್ನೂ ಪ್ರತಿನಿಧಿಸುವ ನಕ್ಷೆಯಾಗಿರುತ್ತದೆ ಎಂಬ ಅಂಶವನ್ನು ನೀವು ಗಮನಿಸಿದರೆ ಮತ್ತು ನೀವು ಹಿಡಿದುಕೊಂಡಿರುವ ನಕ್ಷೆಯ ಗಾತ್ರವನ್ನು ಗಮನಿಸಿದರೆ, ಸಾವಿರಾರು ಚದರ ಕಿಲೋಮೀಟರ್ ವಿಸ್ತೀರ್ಣದ ಭೂಮಿಯ ಮೇಲ್ಮೈಯ ಪ್ರತಿಯೊಂದು ಬಿಂದುವನ್ನು ಕೂಡ ನಿಮ್ಮ ಅಂಗೈಯಲ್ಲಿರುವ ನಕ್ಷೆ ಒಳಗೊಳ್ಳುವುದು ಸಾಧ್ಯವಾಗುತ್ತದೆ ಎಂಬುವ ಅಂಶ ಮೈನವಿರೇಳಿಸುವ ವಿಷಯವೆನ್ನಿಸುವುದಿಲ್ಲವೇ?(ತಾಯಿಗೆ ಬಾಯೊಳು ಮೂಜಗ ತೋರಿದ - ಕಥೆ ಕೇಳಿದ್ದೀರಲ್ಲವೇ - ಅಂತಹ ಪರಿಕಲ್ಪನೆ!) ಆ ಚಿಕ್ಕ ನಕ್ಷೆಯನ್ನು ನೀವು ನಿಮ್ಮ ಮನೆಯಂಗಳದ ನೆಲದ ಮೇಲಿಟ್ಟರೆ  ಆ ಅಂಗಳದ ಒಂದು ಬಿಂದು ಮಾತ್ರ ಆ ನಕ್ಷೆ ತೋರಿಸುವ/ಪ್ರತಿನಿಧಿಸುವ  ಅಸಂಖ್ಯಾತ ಬಿಂದುಗಳಲ್ಲಿ ಒಂದು ಬಿಂದುವಿನ ನೇರಕ್ಕೇ ಇರುತ್ತದೆ. ಇನ್ಯಾವ ಬಿಂದುವೂ ಅದನ್ನು ಪ್ರತಿನಿಧಿಸುವ  ನಕ್ಷೆಯ ಬಿಂದುವಿನ ನೇರಕ್ಕೆ ಇರುವುದಿಲ್ಲ. ಇದನ್ನು ಆಲ್ಜೀಬ್ರಾದ ಕಾಂಟ್ರಾ ಕ್ಷನ್ ಮ್ಯಾಪಿಂಗ್ ಥಿಯರಂ ಮೂಲಕ ಸಾಧಿಸಿ ತೋರಿಸಬಹುದು ಎನ್ನುವುದೇ ಆ ಪ್ರಬಂಧದ ಸಾರಾಂಶ. ನಾನೇನೋ ಅದನ್ನು ಉರು ಹೊಡೆದು ಉಡುಪಿಯಲ್ಲಿ ಹೇಳಿ ಬಂದೆ. ಅಲ್ಲಿನ  ಗಣಿತ ಮೇಸ್ಟ್ರು ಬಿಟ್ಟರೆ ಇನ್ಯಾರಿಗೂ ಅರ್ಥವಾದ ಹಾಗೆ ಕಾಣಲಿಲ್ಲ!

ನನ್ನ ಡಿಗ್ರಿ ಕೊನೆಯ ವರ್ಷದ ದೀಪಾವಳಿ ರಜದಲ್ಲಿ ನಮ್ಮ ಕಾಲೇಜಿನ NSS ಕ್ಯಾಂಪ್ ನಮ್ಮೂರಿನ ಹತ್ತಿರದಲ್ಲೆ (ಸೌಡ ದಲ್ಲಿ) ಏರ್ಪಾಡಾಗಿತ್ತು. ಅದರ ಸಮಾರೋಪ ಸಮಾರಂಭಕ್ಕೆ ಹೋದಾಗ ಆಚಾರ್ಯರು ಅದಕ್ಕೆ ಅತಿಥಿಯಾಗಿ ಕುಂದಾಪುರದ ಪ್ರಸಿದ್ಧ ನ್ಯಾಯವಾದಿಯೊಬ್ಬರನ್ನು ಕರೆದುಕೊಂಡು ಬಂದರು. ಕಾರಿನಿಂದಿಳಿದವರೇ ನನ್ನನ್ನು ನೋಡಿ 'ಏನು ದಿನೇಶ, ನೀನು ಇಲ್ಲಿ?' ಎಂದರು. ನಾನು ನನ್ನ ಮನೆ ಇಲ್ಲಿಗೆ  ಹತ್ತಿರ ಎಂದೆ. ತಕ್ಷಣ ಏನೋ  ನನಪಾಗಿ - 'ನಿನಗೆ ನನ್ನ midterm ಪೇಪರ್ನಲ್ಲಿ ಎಷ್ಟು ಮಾರ್ಕು ಬೇಕು?' - ಎಂದರು. ನನಗೋ ಆಚಾರ್ಯರು ಅತಿಥಿಗಳೆದುರು ನನ್ನ ಮರ್ಯಾದೆ ತೆಗೆಯಲು ಹೊರಟಿದ್ದಾರೆ ಎನ್ನಿಸಿ ನಾಚಿಕೆಯಿಂದ 'ಒಂದು ಅರವತ್ತು ಕೊಟ್ಟರೆ ಸಾಕು' ಎಂದೆ. 'ಹಾಗಾದರೆ ನೀನು ನನಗೆ ಮೂವತ್ತೊಂದು ಮಾರ್ಕು ವಾಪಸು ಕೊಡಬೇಕಾಗುತ್ತದೆ' ಎಂದರು. ಬಳಿಕ ಅತಿಥಿ ವಕೀಲರ ಕಡೆಗೆ ತಿರುಗಿ - ಇವನ ಉತ್ತರ ಪತ್ರಿಕೆ ನೋಡಿ ಖುಷಿಯಾಯಿತು. ಬೇರೆಯವರೆಲ್ಲ ನನ್ನ ನೋಟ್ಸ್ ಬಾಯಿಪಾಠ ಮಾಡಿಕೊಂಡು ಬಂದು ಉತ್ತರ ಬರೆದರೆ ಇವನು ಇವನದೇ ಭಾಷೆಯಲ್ಲಿ ಉತ್ತರ ಬರೆಯುತ್ತಾನೆ. ನನ್ನ ಪಾಠ ಜೀರ್ಣ ಮಾಡಿಕೊಂಡಿದ್ದಾನೆ ಎಂದು ಖುಷಿಯಾಯಿತು - ಎಂದರು. 

ಹಾಗೆಯೇ ಕಾಲೇಜಿನ ಲೈಬ್ರರಿಯಲ್ಲಿ ಗಣಿತ ವಿಷಯದ ಬಗ್ಗೆ ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿ ಯವರಿಂದ ಪ್ರಕಟಿಸಲ್ಪಟ್ಟ ಉತ್ತಮ ಪುಸ್ತಕಗಳನ್ನು ತರಿಸಿಟ್ಟಿರುವುದಾಗಿಯೂ ಅವುಗಳನ್ನು ಓದುವಂತೆ ನನಗೆ  ಹೇಳಿದರು. 

ಒಮ್ಮೊಮ್ಮೆ ಆಚಾರ್ಯರು ನನಗೆ ಹೇಳುತ್ತಿದ್ದರು - ದಿನೇಶ, ನೀನು ಸ್ವಲ್ಪ ಮುಂಚೆಯೇ ಹುಟ್ಟಬೇಕಿತ್ತು! ಈಗ ಕಾಲ ಹೇಗಿದೆಯೆಂದರೆ ಕಲಿಸುವ ಬಗ್ಗೆ ಆಸಕ್ತಿಯಿಲ್ಲದವರೂ ಅಧ್ಯಾಪಕರಾಗಿ ಬಂದು ಸೇರಿಕೊಳ್ಳುತ್ತಿದ್ದಾರೆ ಹೊಟ್ಟೆಪಾಡಿಗಾಗಿ. ಕಾಟಾಚಾರಕ್ಕೆ ಪಾಠ ಮಾಡಿಕೊಂಡು ಹೋಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕರಾಗುತ್ತಾರೆ. ಅವರಿಗೆ ತಾವು ಎಷ್ಟು ಜನರ ಭವಿಷ್ಯ ಹಾಳು ಮಾಡುತ್ತಿದ್ದೇವೆನ್ನುವ ಪರಿಜ್ಞಾನವೂ ಇರುವುದಿಲ್ಲ!

ಮತ್ತೊಮ್ಮೆ ಪ್ರಿನ್ಸಿಪಾಲರ  ರೂಮಿಗೆ ಹೋದಾಗ ಒಂದರ ಹಿಂದೆ ಒಂದು ಪೇಪರ್ಗಳಿಗೆ  ಸಹಿ ಮಾಡುತ್ತ ಕೂತಿದ್ದವರು - ನೋಡು ಮಾರಾಯ, ಪ್ರಿನ್ಸಿಪಾಲ್ ಕೆಲಸ ಕ್ಲರಿಕಲ್ ಕೆಲಸ ಇದ್ದ ಹಾಗೆ, ತಲೆ ಚಿಟ್ಟು ಹಿಡಿದು ಹೋಗುತ್ತದೆ. ಅದಕ್ಕೇ ನಾನು ಕ್ಲಾಸ್ ಗೆ ಓಡಿ  ಬರುವುದು ಸ್ವಲ್ಪ ರೆಫ್ರೆಷ್ ಆಗಲಿಕ್ಕೆ. ಇಲ್ಲದಿದ್ದರೆ ನನ್ನ ಗಣಿತ ಶಾಸ್ತ್ರದ ಪರಿಣತಿಯೆಲ್ಲ ವ್ಯರ್ಥವಲ್ಲವೇ?  - ಎಂದಿದ್ದರು.

ನಾನು ಮುಂದೆ ಮಂಗಳೂರು ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಗಣಿತವನ್ನೇ ಆಯ್ದುಕೊಂಡು ಸೇರಿಕೊಂಡೆ. ಆಚಾರ್ಯರು ಹೇಳಿಕೊಟ್ಟ ರಿಯಲ್ ಅನಾಲಿಸಿಸ್ ಮತ್ತು  ಟೊಪಾಲಜಿ, ಅಲ್ಲಿ   ಪ್ರತ್ಯೇಕ ವಿಷಯಗಳಾಗಿ  ಅಧ್ಯಯನಕ್ಕಿತ್ತು. ಒಂದು ತಿಂಗಳಾದ ಬಳಿಕ ಟೊಪಾಲಜಿ ಅಧ್ಯಾಪಕರು ಒಂದು ಟೆಸ್ಟ್ ತೆಗೆದುಕೊಂಡರು. ಅದರ ಉತ್ತರ ಮೌಲ್ಯಮಾಪನದಲ್ಲಿ ನನಗೆ 9ಕ್ಕೆ 9 ಬಂತು. ಅದನ್ನು ನೋಡಿ ಎಂಫಿಲ್ ಓದುತ್ತಿದ್ದವನೊಬ್ಬ ಕೇಳಿದ - ಯಾವ ಕಾಲೇಜಿನಿಂದ ಬಂದದ್ದು? ನಾನು ಉತ್ತರಿಸಿದರೆ, ಆತ ತಣ್ಣಗೆ ಹೇಳಿದ - ನಾರಾಯಣ ಆಚಾರ್ಯರ ಶಿಷ್ಯನೇ?  ಹಾಗಿದ್ದರೆ 9ಕ್ಕೆ 9 ಬರುವುದು ವಿಶೇಷವಲ್ಲ! ಆಗ ತಿಳಿಯಿತು ಆಚಾರ್ಯರ ಕೀರ್ತಿ ಅಲ್ಲಿಯವರೆಗೂ ಹರಡಿದೆ  ಎಂದು. 

ನಾನು ಗಣಿತದ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಕಾರಣ - ನಾನು ಏನು ಮಾಡಿದರೂ ಶ್ರೇಯಸ್ಸು ಆಚಾರ್ಯರಿಗೇ ಹೋಗುತ್ತದಲ್ಲ  - ಎಂಬ ಬೇಸರದಿಂದಲ್ಲ, ನನಗೆ ಮೈಸೂರು ಯೂನಿವರ್ಸಿಟಿಯಲ್ಲಿ  ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೀಟು ಸಿಕ್ಕಿತ್ತು  'ವಿಜ್ಞಾನಿ'   ಹುದ್ದೆಯ  ಕೆಲಸದ ಭರವಸೆಯೊಂದಿಗೆ!

ನಾನು ದೂರದ ಡೆಹ್ರಾಡೂನ್ನಲ್ಲಿ  ಕೆಲಸಕ್ಕೆ ಸೇರಿಕೊಂಡ ನಂತರ ರಜಾದ ಮೇಲೆ ಊರಿಗೆ ಬಂದಾಗ ಆಚಾರ್ಯರನ್ನು ಭೇಟಿ ಮಾಡುತ್ತಿದ್ದೆ. ಪ್ರಿನ್ಸಿಪಾಲರ ರೂಮಿನಲ್ಲಿ   ಗಂಟೆಗಟ್ಟಲೆ ಹರಟೆ ಹೊಡೆದು ಬರುತ್ತಿದ್ದೆ. ಆಚಾರ್ಯರು  TIFR ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರೆಂದು ಕೇಳಿದ್ದ ನಾನು ಒಮ್ಮೆಅವರನ್ನು  ಕೇಳಿದ್ದೆ - ಸರ್, ನೀವು ಅಷ್ಟೊಳ್ಳೆಯ ಸಂಸ್ಥೆ ಬಿಟ್ಟು ಯಾಕೆ ಬಂದಿರಿ? ಅಲ್ಲೇ ಇದ್ದಿದ್ದರೆ ಗಣಿತ ಶಾಸ್ತ್ರದಲ್ಲಿ ವಿಶ್ವದರ್ಜೆಯ ತಜ್ಞರಾಗಬಹುದಾಗಿತ್ತಲ್ಲವೇ? ಆಗ ಹೇಳಿದ್ದರು - ನನ್ನ ಗೈಡ್ ನನ್ನ ಸಂಶೋಧನಾ ಸ್ಕಾಲರ್ಷಿಪ್ ಮುಂದುವರಿಸುವ ಬಗ್ಗೆ ಖಚಿತ ಭರವಸೆ ಕೊಡುತ್ತಿರಲಿಲ್ಲ. ಅಷ್ಟೊತ್ತಿಗೆ ನನಗೆ ಮದುವೆಯಾಗಿತ್ತು, ಮುಂದೇನು ಹೊಟ್ಟೆಪಾಡಿಗೆ ಎಂಬ ಭಯದಲ್ಲಿ ಮಣಿಪಾಲದ MIT ಯವರು ಖಾಯಂ ಉದ್ಯೋಗ ಭರವಸೆ ಕೊಟ್ಟಿದ್ದರಿಂದ ಬಿಟ್ಟು ಬಂದೆ! ಇನ್ನೊಮ್ಮೆ ಕೇಳಿದ್ದೆ - ನೀವು ಪಿಎಚ್ಡಿ ಯಾಕೆ ಮಾಡಲಿಲ್ಲ? ಅವರೆಂದರು - TIFR ನಲ್ಲಿ ನಾಲ್ಕು ಪೇಪರ್ ಪಬ್ಲಿಶ್ ಮಾಡಿದ್ದೆ ಇಂಟರ್ನ್ಯಾಷನಲ್ ಜರ್ನಲ್ ಗಳಲ್ಲಿ. ಇಲ್ಲಿಗೆ ಬಂದ  ಮೇಲೆ ಒಮ್ಮೆ ಒಂದು ಗೈಡ್ ಬಳಿ ಪಿಎಚ್ಡಿ ಗಾಗಿ  ರಿಜಿಸ್ಟರ್ ಮಾಡಿಸಿದ್ದೆ. ಒಂದೆರಡು ವರ್ಷಗಳಲ್ಲಿ ಗೈಡ್ ಅಮೆರಿಕಕ್ಕೆ ಹೊರಟುಹೋದರು, ಹಾಗಾಗಿ ಆದು ಅರ್ಧದಲ್ಲೇ ಉಳಿಯಿತು. ಮತ್ತೆ ಕೇಳಿದ್ದೆ - ನಿಮ್ಮಂಥವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾಗಿತ್ತು, ಅಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಾಗುತ್ತಿತ್ತು. ಆಗ  ಅವರೆಂದರು  - ಮಂಗಳೂರಿನ ಸ್ನಾತಕೋತ್ತರ ಕೇಂದ್ರದ ಗಣಿತ ವಿಭಾಗದ ಪ್ರಮುಖರಿಗೆ ನನ್ನ ಬಗ್ಗೆ ಇಷ್ಟವಾಗುತ್ತಿರಲಿಲ್ಲ, ಹಾಗೆ ಅವರಲ್ಲಿಗೆ  ಹೋಗಲಿಲ್ಲ. ಅವರು ನಿವೃತ್ತಿಯಾದ ಬಳಿಕ ಪ್ರಯತ್ನಿಸಬಹುದಿತ್ತು. ಆದರೆ ಆಗ ನಾನು ಎಲ್ಲರಿಗಿಂತ ಕಿರಿಯವನಾಗಿ ಸೇರಿಕೊಳ್ಳಬೇಕಾಗುತ್ತದೆ, ಅದಕ್ಕೆ ಹೋಗಲಿಲ್ಲ. ಇಲ್ಲಿ ಡಿಗ್ರಿ ಮಕ್ಕಳಲ್ಲಿ ಕೆಲವರಾದರೂ ಪಾಠ ಕೇಳುವವರು ಸಿಕ್ಕರೆ  ಸಾಕು ನನಗೆ - ಎಂದಿದ್ದರು. 

ಆಚಾರ್ಯರು ಹೊಸ ತಂತ್ರಜ್ಞಾನಗಳ ಬಗ್ಗೆ ಆಸಕ್ತಿಯುಳ್ಳವರಾಗಿದ್ದರು. ನಮಗೆ ಡಿಗ್ರಿ ಕೊನೆಯ ವರ್ಷಕ್ಕೆ ಗಣಿತದ ಮೂರು ಪೇಪರ್ಗಳಲ್ಲಿ ಒಂದಕ್ಕೆ ಕಂಪ್ಯೂಟರ್ ಭಾಷೆಗಳಾದ - ಬೇಸಿಕ್ ಮತ್ತು ಕೋಬಾಲ್ ಕಲಿಸುವುದಕ್ಕೆ ಒಬ್ಬ ಅಧ್ಯಾಪಕರನ್ನು ತರಬೇತಿಗೆ ಕಳಿಸಿ ಅದನ್ನು ಕಲಿಸುವುದಕ್ಕೆ ಅನುವು ಮಾಡಿಕೊಟ್ಟರು. ಕಂಪ್ಯೂಟರ್ ನೋಡದೆ ನಾವು ಕಂಪ್ಯೂಟರ್ ಭಾಷೆಗಳನ್ನು  ಕಲಿತಿದ್ದೆವು. ವರ್ಷದ ಕೊನೆಗೆ ಯಾರನ್ನೋ ಕರೆಸಿ ಕಂಪ್ಯೂಟರ್ ನ  ತೋರಿಸಿ ಉಪನ್ಯಾಸ ಕೊಡಿಸಿದ್ದರು. ಆಗ ನಾನೊಂದು ಕಂಪ್ಯೂಟರ್ ಪ್ರೋಗ್ರಾಮ್ ತಯಾರು ಮಾಡಿಕೊಂಡು ಹೋಗಿದ್ದೆ. ಅದನ್ನು ಆ ಕಂಪ್ಯೂಟರ್ ನಲ್ಲಿ ರನ್ ಮಾಡಿ ತೋರಿಸಿದಾಗ ಆಚಾರ್ಯರು ಖುಷಿ ಪಟ್ಟಿದ್ದರು! ಇದು ಮುಂದೆ ನನ್ನ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಪ್ರಚೋದನೆಯಾಯಿತು. ಅದಕ್ಕಾಗಿ  ಮೈಸೂರಿಗೆ ಇಂಟರ್ವ್ಯೂಗೆ ಹೋದಾಗ ನಾನು ಕಂಪ್ಯೂಟರ್ ಭಾಷೆ ಗೊತ್ತಿರುವುದಾಗಿ ಹೇಳಿಕೊಂಡಾಗ ಸಂದರ್ಶಕರು ಯಾವ ಕಂಪ್ಯೂಟರ್ ಬಳಸಿದ್ದೀರಿ ಎಂದು ಕೇಳಿದಾಗ ನಾನು -ನಮ್ಮಲ್ಲಿ ಕಂಪ್ಯೂಟರ್ ಇರಲಿಲ್ಲ - ಎಂದೆ. ಅವರು ಗೊಳ್ಳನೆ ನಕ್ಕು ಕಂಪ್ಯೂಟರ್ ನೋಡದೆ ಆದರೆ ಭಾಷೆ ಕಲಿತಿರಾ ಎಂದು ಆಶ್ಚರ್ಯಚಕಿತರಾದರು. 

 ಆಚಾರ್ಯರ ಬಗ್ಗೆ ಡಿಗ್ರಿ ಕೊನೆಯ ವರ್ಷದಲ್ಲಿದ್ದಾಗ  ಒಂದು ಕವನ ಬರೆದು ನನ್ನ ಕನ್ನಡ ಪ್ರೊಫೆಸರ್ A.V. ನಾವಡರಿಗೆ ಕೊಟ್ಟು ಅವರು ಕಾಲೇಜಿನ ಮ್ಯಾಗಝಿನ್ 'ದರ್ಶನ' ದಲ್ಲಿ (1987) ಪ್ರಕಟಿಸಿದ್ದರು.  ಅದರ ಶೀರ್ಷಿಕೆ 'ಗುರುದರ್ಶನಂ'. (ನನ್ನ ಬಳಿ  ಅದರ ಪ್ರತಿ ಇಲ್ಲ. ಎಲ್ಲಾದರೂ ಸಿಗಬಹುದೇ ನೋಡಬೇಕು. ಇನ್ನೊಮ್ಮೆ ಅದನ್ನು ಓದಿ ಅಗಲಿದ ನನ್ನ ಆಚಾರ್ಯರಿಗೆ ನಮಿಸೋಣವೆಂದುಕೊಂಡಿದ್ದೇನೆ.

ಪ್ರೊಫೆಸರ್ ಅಂಬಲಪಾಡಿ  ನಾರಾಯಣ ಆಚಾರ್ಯರು ಡಿಸೆಂಬರ್ 19, 2025 ರಂದು  ನಮ್ಮನ್ನಗಲಿದರು. ಶಿಕ್ಷಕರ ದಿನಾಚರಣೆಯ ದಿನದಂದು ಅವರನ್ನು ನೆನೆಯುತ್ತಿದ್ದೇನೆ  )


ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ 

05,ಸೆಪ್ಟೆಂಬರ್ 2026