Wednesday, September 30, 2020

ನೆನೆದು ತನ್ನ ಬಳಗವ ಕರೆದ ಬಿಳಿಮಲೆಯವರು

ಕಾಗೆ ಮುಟ್ಟಿದ ನೀರು ಮಲಿನ ಎಂಬ ಭಾವನೆ ಕೆಲವೆಡೆ ಇದೆಯಂತೆ. ಮನುಷ್ಯರ ಇಂತಹ ಮೌಢ್ಯತೆಯನ್ನು ನಿವಾರಿಸಲು ಶ್ರಮಿಸುವುದು ಕರ್ತವ್ಯವೆಂದು ಬಗೆಯುವ ಶಿಕ್ಷಕರಿದ್ದಾರೆ. ಅಂತಹ ಶಿಕ್ಷಕರಲ್ಲೊಬ್ಬರು ಪುರುಷೋತ್ತಮ ಬಿಳಿಮಲೆ ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಈ ಮಲಿನತೆಯನ್ನೇ ಸಂಕೇತವಾಗಿ ಬಳಸಿ ತಮ್ಮ ಬದುಕಿನ ಕುರಿತು ಬರೆದ ಪುಸ್ತಕಕ್ಕೆ ಬಿಳಿಮಲೆಯವರು "ಕಾಗೆ ಮುಟ್ಟಿದ ನೀರು" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅದನ್ನು  ಓದುತ್ತ ಹೋದಂತೆ ಈ ಮೌಢ್ಯತೆ ಅವರ ಬದುಕಿನಲ್ಲಿ ಎಷ್ಟೊಂದು ಆಘಾತಕಾರಿ ಪರಿಣಾಮ ಉಂಟು ಮಾಡ ಹೊರಟಿತ್ತೆಂದರೆ ಓದುಗರನ್ನು ಕೂಡಾ ಬೆಚ್ಚಿ ಬೀಳಿಸುವಷ್ಟು ಎಂದು ಅರಿವಾಗುತ್ತದೆ!

ದಟ್ಟಕಾಡಿನ  ಮೂಲೆಯಲ್ಲೆಲ್ಲೋ ಹುಟ್ಟಿ, ಸುತ್ತಮುತ್ತಲಿನ ಜನರಿಗೆ ಅಪಶಕುನದ ಸಂಕೇತವಾಗಿ ಕಂಡ 'ಅದಮ್ಯ ಚೇತನ' ವೊಂದು ತನ್ನ ಸುತ್ತಲಿನ ಕಠೋರ ವಾತಾವರಣದ ಅಡತಡೆಗಳನ್ನು ನಿವಾರಿಸಿಕೊಂಡು  ನೀರಬುಗ್ಗೆಯ ಗುಣದಂತೆ  - ಕತ್ತು  ಹಿಚುಕುವಷ್ಟು ಒತ್ತಡ ಹಾಕಿದಾಗಲೆಲ್ಲ ಇನ್ನಷ್ಟು ಎತ್ತರಕ್ಕೆ ಚಿಮ್ಮುವಂತೆ,  ಎತ್ತರಕ್ಕೆ ಏರುತ್ತ ಹೋದ ಕತೆ,  ಯುವ ಪೀಳಿಗೆಗಂತೂ ಸ್ಪೂರ್ತಿದಾಯಕವಾಗಬಲ್ಲುದಾಗಿದೆ.

  ಕಥನದ ಉದ್ದಕ್ಕೂ ನಿರುದ್ವಿಗ್ನವಾಗಿ, ಆಪ್ತವಾಗಿ,  ಕಾಡುವ ನೆನಪುಗಳನ್ನು ಪ್ರಾಮಾಣಿಕವಾಗಿ ನಿಮ್ಮ ಮುಂದಿಡುವ ಭಾವವಿದೆ. ಅದೆಷ್ಟೋ ಜನ ತನಗೆ ನೆರವಾದವರ ನೆನೆದು ಕೃತಜ್ಞತೆ ಸಲ್ಲಿಸುವ ನಮ್ರತಾಭಾವವಿದೆ.  ಮುಂದಿನ ಪೀಳಿಗೆಗೆ ಬದುಕಿನ ಹೋರಾಟದ ಬಗೆಗೆ ತಿಳಿಯಹೇಳುವ ಕಾಳಜಿಯಿದೆ.  ಬದುಕನ್ನು ಸಂಪನ್ನಗೊಳಿಸಿಕೊಳ್ಳುವ ತೀವ್ರ ಹಂಬಲವಿದೆ.  ಪುಸ್ತಕದ ತುಂಬೆಲ್ಲ ಅದೆಷ್ಟು ಗುಣಾತ್ಮಕ ಮನೋಭಾವ ತುಂಬಿದೆಯಂದರೆ  ನನಗೆ  ಅಬ್ದುಲ್ ಕಲಾಂ   "Wings of Fire" (ಅಗ್ನಿಯ ರೆಕ್ಕೆಗಳು ) ನೆನಪಿಸುವಷ್ಟು!  ಕಲಾಂರವರಷ್ಟು ಏಕಮುಖವಾಗಿ ಗುಣಾತ್ಮಕವಾಗಿ ಯೋಚಿಸಬಲ್ಲವರನ್ನು ನಾನು ಕಂಡಿಲ್ಲ.  ಹಾಳುಹಂಪಿಯಲ್ಲಿನ ಕಹಿನೆನಪುಗಳನ್ನು ತೋಡಿಕೊಂಡಿದ್ದು , ದೆಹಲಿಯ ಕರ್ನಾಟಕ ಸಂಘದ ಕಾರ್ಯಕ್ಕೆ ಸುರಿಸಿದ  ಬೆವರಿಗೆ  ದೊರೆತ    ಕೆಲವರ ಕೊಂಕುಮಾತಿನ ಪ್ರತಿಫಲಕ್ಕೆ  ಬೇಸರತೋಡಿಕೊಂಡಿದ್ದು ಬಿಟ್ಟರೆ, ಪುಸ್ತಕದುದ್ದಕ್ಕೂ ಮನುಷ್ಯರ ಸದ್ಗುಣಗಳನ್ನು ಎತ್ತಿಹಿಡಿಯುವ ಸಮಾಜವನ್ನು ಸುಧಾರಿಸಬಲ್ಲ ಧೋರಣೆಗಳೇ  ಕಾಣಬರುತ್ತವೆ.  

ಬದುಕಿನ ಅನುಭವ ಸಾಗರದಿಂದ ಮುತ್ತುಗಳನ್ನಷ್ಟೇ ಹೆಕ್ಕಿ ಬರೆದಿದ್ದೇನೆ ಎಂದು ಲೇಖಕರು ಮುನ್ನುಡಿಯಲ್ಲಿ ಹೇಳಿದ್ದಾರೆ. ಹಂಪಿಯ ಕಹಿನೆನಪುಗಳನ್ನು ಕುರಿತು   ಯಾಕೆ ಬರೆದರು ಎಂಬ ಪ್ರಶ್ನೆ ಕಾಡುತ್ತದೆ.  ಅಲ್ಲಿನ  ಕಹಿ ಅನುಭವಗಳು ಬರೀ ಸ್ವಂತದ್ದಲ್ಲದೆ ಇನ್ನೂ ಹಲವರದ್ದಾಗಿತ್ತು ಎನ್ನುವುದಕ್ಕಾಗಿ ಅದನ್ನು ದಾಖಲಿಸಲು ಬರೆದಿರಬಹುದು ಅನ್ನಿಸುತ್ತದೆ.  ಅಲ್ಲಿ ವಿನೋದವಾಗಿ ಬಣ್ಣಿಸಲ್ಪಟ್ಟಿರುವ  ಸನ್ನಿವೇಶಗಳು   ನನಗೆ ಬಿ.ಜಿ.ಲ್. ಸ್ವಾಮಿಯವರು  ಮದ್ರಾಸ್ ಕಾಲೇಜಿನಲ್ಲಿನ   ತಮ್ಮ ಅನುಭವಗಳ ಬಗ್ಗೆ   ಹಲವಾರು ಪುಸ್ತಕಗಳಲ್ಲಿ ವಿನೋದವಾಗಿ  ಬಣ್ಣಿಸಿರುವುದನ್ನು  ನೆನಪಿಗೆ  ತರುತ್ತದೆ.  ಸ್ವಾಮಿಯವರ  'ಟೀಕೆ-ಟಿಪ್ಪಣಿ'ಗಳು ಎಷ್ಟಿತ್ತಂದರೆ ಲಂಕೇಶ್ ಗೂ  ಸ್ವಲ್ಪ ಅತೀ ಅನ್ನಿಸುವಷ್ಟು!

ಬಿಳಿಮಲೆಯವರು ಬಣ್ಣಿಸುವ  ಕಾಡುಹುಡುಗನ ಬಾಲ್ಯದ ಆಟೋಟಗಳು, ಸಂಗಾತಿಗಳಾದ ಮೀನು, ಏಡಿ, ಸಿಗಡಿ, ಇಲಿ,ಹಾವು, ಹಕ್ಕಿ, ಹುಳುಗಳು,   ನಮ್ಮ ಕಾರ್ಟೂನ್ ಪ್ರಿಯ ಹುಡುಗ-ಹುಡುಗಿಯರಿಗೆ 'ಮೋಗ್ಲಿ'ಯನ್ನು ನೆನಪಿಗೆ ತರಬಹುದು.  ಅವರು ಬಣ್ಣಿಸಿದ -  ಮಳೆಗಾಲದಲ್ಲೊಂದು ದಿನ  ಗೊರಬೆ ಧರಿಸಿ ಶಾಲೆಯಿಂದ ಹಿಂದಿರುಗಿ ಬರುವಾಗ, ಕರಿಮಲೆಯ ದಂಡಕಾರಣ್ಯದ  ತುಂಬಿ ಹರಿಯುವ ಹಳ್ಳದ ಬಳಿ, ತಟಪಟ ಹನಿಗಳ ನಡುವೆ,   ಹಳ್ಳ ದಾಟಿಸಲು ಬರುವ  ತಾಯಿಗಾಗಿ ಕತ್ತಲಾದರೂ ಕಾದೂ ಕಾದೂ ಕೊರಗಿ ಬಳಲಿ ನಿದ್ದೆ ಹೋದ ಬಾಲಕನ   - ಸನ್ನಿವೇಶ ನೆನೆಸಿಕೊಂಡಾಗಲೆಲ್ಲ ಬೆನ್ನುಹುರಿಯೊಳಗೆ ಮಿಂಚುಹರಿಯುತ್ತದೆ! ಘೋರಾರಣ್ಯದಲ್ಲಿ ಒಂಟಿಯಾದ ಪುಟ್ಟ ಬಾಲಕನನ್ನು  ಮುತ್ತಬಹುದಾದ   ಘೂಕ, ವೃಕ, ಭಲ್ಲುಕ, ಜಂಬುಕ, ಪುಲಿ, ಫಣಿ ,ಭೂತಸಂಕುಲ ಗಳೆಲ್ಲವನ್ನು  ಕಲ್ಪಿಸಿಕೊಂಡು  ಎದೆ ಢವಗುಟ್ಟುತ್ತದೆ! 'ಚಂದ್ರಮತಿಯ ಪ್ರಲಾಪ'ವನ್ನು ಹರಿಶ್ಚಂದ್ರ ಕಾವ್ಯದಲ್ಲಿ  ಹೃದಯಂಗಮವಾಗಿ ಬಣ್ಣಿಸುವ ರಾಘವಾಂಕ ಇದರ ಬಗ್ಗೆ  ಕೇಳಿದ್ದರೆ  ಮತ್ತೆ ಸ್ಪೂರ್ತಿಗೊಂಡು  'ತಾಯಿಯೆಂದುಂ  ಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ... ' ಎಂದು ಇನ್ನೊಂದು ಮನಮುಟ್ಟುವ ಕಾವ್ಯ ಹೊಸೆಯುತ್ತಿದ್ದ ಅನ್ನಿಸುತ್ತದೆ.

ಕಾಡಿನ ಕಠೋರ ಪರಿಸರ ಮಾತ್ರವಲ್ಲದೆ ಅದರಲ್ಲಿ ಬದುಕುವ ಜನರ ಜಂಜಾಟಗಳ ಬಣ್ಣನೆ  ಓದುಗರನ್ನು ತಟ್ಟುತ್ತದೆ. ಇಲ್ಲಿ ಬಣ್ಣಿಸಲ್ಪಟ್ಟ - ಅಪ್ಪನ ಜಾತಕ ಮತ್ತು ಪಂಚಾಂಗಗಳ ನಂಬಿಕೆ, ಅಮ್ಮನ ಕಾಗೆ ಮುಟ್ಟಿದರೆ ಮೈಲಿಗೆಯಾಗುವ ನಂಬಿಕೆ, ' ಜಾತಕನಿಗೆ ವಿದ್ಯಾಯೋಗವಿಲ್ಲವು' ಎಂದು ಕಾಡುಜನರ ತಲೆಯ ಮೇಲೆ ಚಪ್ಪಡಿ ಎಳೆಯ ಹೊರಡುವ ಜ್ಯೋತಿಷಿ, ಹಲವು ವರ್ಷಗಳ ಬಳಿಕ ಅಪ್ಪ  ಒತ್ತಾಯದಿಂದ  - ಶಾಲೆ ಸೇರಿಸಲು ಒಳ್ಳೆಯ ದಿನ ಗೊತ್ತು ಮಾಡಿಕೊಡಿ ಎಂದಾಗ ಶಾಲೆಯ ರಜಾದಿನವನ್ನು ಗೊತ್ತು ಮಾಡಿಕೊಟ್ಟ ಜ್ಯೋತಿಷಿದೋಷ ನಿವಾರಣೆಗೆ ಒಬ್ಬ ಅಜ್ಜನ ಬಾಳೆಯೊಂದಿಗಿನ ಮೂರನೇ ಮದುವೆ, ಹಠವಾದಿಯಾದ  ಇನ್ನೊಂದು ಅಜ್ಜ (ತಂದೆಯ ತಂದೆ ) ಹೆರಲು ಹೋದ ಹೆಂಡತಿ ಭಾರೀ  ಮಳೆಯಿಂದಾಗಿ ತುಂಬಿದ ಹೊಳೆ ದಾಟಲಾಗದೆ ನಿಗದಿಪಡಿಸಿದ ದಿನ ಕಳೆದ ನಂತರ ಹಸುಗೂಸಿನೊಂದಿಗೆ ಗಂಡನ ಮನೆ ತಲುಪಿದ್ದಕ್ಕೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಮಗುವನ್ನು ಮಾತ್ರ ಉಳಿಸಿಕೊಂಡದ್ದು - ಇವು ನಮ್ಮ ಗ್ರಾಮೀಣ ಪರಿಸರಗಳಲ್ಲಿ ಇಂದೂ ಕಾಣಬಹುದಾದ ಜನರ ಬದುಕನ್ನು ಕಲಕುವ 'ನಂಬಿದವರ ನರಕ'  ಕರುಳು  ಚುರಿಲ್ಲೆನ್ನಿಸುವ ಕಿರುಚಿತ್ರಗಳು.  

ಬಾಲ್ಯದಲ್ಲಿ ಅಮ್ಮನೊಡನೆ ಯಕ್ಷಗಾನ ನೋಡುವಾಗ ಪೂತನಿ 'ಇಲ್ಲಿರುವ ಮಕ್ಕಳನ್ನೆಲ್ಲ ವಿಷದ ಮೊಲೆ ಕೊಟ್ಟು ಕೊಲ್ಲುತ್ತೇನೆ ' ಎಂದು ಅಬ್ಬರಿಸಿದಾಗ ಹೆದರಿ ಆಟದ ಅಂಗಳದಿಂದಾಚೆ ಓಡಿಹೋದ ಸನ್ನಿವೇಶ  ಕರಾವಳಿ-ಮಲೆನಾಡಿನ ಬಹುತೇಕ ಮಂದಿಗೆ ತಮ್ಮ  ಬಾಲ್ಯ ನೆನಪಿಸಿ  ಮುಗುಳ್ನಗೆ ಮೂಡಿಸಬಲ್ಲುದು. 

ಚೋಟುದ್ದದ ಹುಡುಗನಾಗಿದ್ದಾಗ ಮಳೆಗಾಲದಲ್ಲಿ  ಹೊಳೆ ದಾಟುವಾಗ  ಅರ್ಧ ನೀರಿನಲ್ಲಿ ಮುಳುಗಿ, ಇನ್ನರ್ಧ ಅಮ್ಮನ ತೋಳಿನಲ್ಲಿ  ತೂಗುಯ್ಯಾಲೆಯಾಡುತ್ತ, ಚಡ್ಡಿ ಚಂಡಿಯಾದರೂ - ತೇಲುತ್ತ ಹೋಗುವ  ಸುಖಕ್ಕೆ ಹಾತೊರೆಯುವ ಸಂದರ್ಭದ ಬಣ್ಣನೆ ನಮ್ಮ ಜೀವಕ್ಕೂ    ರೆಕ್ಕೆಗಳನ್ನೊದಗಿಸುವಂತಿದೆ.  

ಜಾತ್ರೆಯ ಯಕ್ಷಗಾನ  ನೋಡಲು ಹೋದಾಗ ನಿದ್ದೆಗಣ್ಣಿನಲ್ಲಿ ನಡುರಾತ್ರಿಯಲ್ಲಿ ನಾಲ್ಕಾಣೆ ಕಳೆದು ಕೊಂಡು ನೋವು ಅನುಭವಿಸಿದ್ದನ್ನು ಬಣ್ಣಿಸುವಾಗ ಬಳಸುವ ಸಂಕೇತ ಅತೀ ಯೋಗ್ಯವಾದದ್ದಾಗಿದೆ . ಆಘಾತದಿಂದ  ಎದ್ದು ಬಂದು 'ಕಾಸರ್ಕನ ಮರದ ಬುಡದಲ್ಲಿ ನಿಂತೆ' ಎನ್ನುತ್ತಾರೆ. ಕಾಸರ್ಕನ ಕಾಯಿಯನ್ನು ಯಾರಾದರೂ ಒಮ್ಮೆ ತಿಂದರೆ ಅದರ ಕಹಿಯನ್ನು ಅವರ ಜೀವಮಾನದಲ್ಲಿ ಮರೆಯಲಾಗದು!  

ಮದುವೆಯ ವಿಷಯದಲ್ಲಿ ವಡ್ಡರ್ಸೆಯವರು  "ನೀನು ಕೋಳಿ ತಿನ್ನುವವನು, ಅವಳು ಅಲ್ಲ. ಇದು ಮದುವೆಯಾದ ಮೇಲೆ ದೊಡ್ಡ ಸಮಸ್ಯೆಯಾಗುತ್ತದೆ . ಹಾಗಾಗಿ ಎಲ್ಲವನ್ನೂ ಮರೆತು, ಹೊಸಬದುಕು ಶುರು ಮಾಡು. ಕಾಲ ಎಲ್ಲವನ್ನೂ ಮರೆಸಿಬಿಡುತ್ತದೆ" ಎಂದು ಕೊಟ್ಟ ಸಲಹೆಯಲ್ಲಿ ಮಧ್ಯಭಾಗವನ್ನು (ವಾಕ್ಯ ಮತ್ತು ೩ರ ಮೊದಲಾರ್ಧ) ಬಿಟ್ಟು ಉಳಿದದ್ದನ್ನು ಆಶೀರ್ವಚನವೆಂದು ಪರಿಗಣಿಸಿದ್ದಾಗಿ  ಕಾಣುತ್ತದೆ ಬಿಳಿಮಲೆಯವರು! ಕೇಳಿದ್ದರಲ್ಲಿ  ನಮಗೆ ಸೂಕ್ತವಾದದ್ದನ್ನು  ಮಾತ್ರ ಆರಿಸಿಕೊಳ್ಳುವ ಜಾಣ್ಮೆ  ಬೆಳೆಸಿಕೊಂಡಲ್ಲಿ ಮಾತ್ರ ನಾವು ನಮ್ಮ ಬಾಳನ್ನು ರೂಪಿಸಿಕೊಳ್ಳಬಹುದು. ಹೆರರು ಕಟ್ಟಿಕೊಟ್ಟ ಬುತ್ತಿಯನ್ನು  ನೆಚ್ಚಿ ಬಾಳಲಾಗುವುದೇ?

ಪುಸ್ತಕದ  ಸುಮಾರು ಕಾಲುಭಾಗವನ್ನು ತನ್ನ ಪ್ರವಾಸ ಕಥನಕ್ಕೆ ಮೀಸಲಾಗಿಸಿದ್ದು ಕಾಣುತ್ತದೆ. ವಿವರಗಳು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಅನ್ನಿಸಿದರೂ ಸ್ವಲ್ಪ ಉದ್ದವಾಯಿತೆನಿಸುತ್ತದೆ.   (ಮೊದಲ ಜಪಾನ್ ಪ್ರವಾಸದ ವಿವರಗಳಲ್ಲಿ  ಕೆಲವು ಮರುಕಳಿಸಿದ್ದು ಕಾಣುತ್ತದೆ.)

ಬಣ್ಣಿಸಿದ ಹಲವಾರು ವಿಷಯಗಳಿಗೆ ಪೂರಕ ಛಾಯಾಚಿತ್ರಗಳನ್ನು ಒದಗಿಸಿದರೆ ಓದುಗರಿಗೆ ಅನುಕೂಲವಾಗಬಹುದು ಅನ್ನಿಸುತ್ತದೆ. ಪುಸ್ತಕದ ಪುಟಗಳ ಮಿತಿಯನ್ನು ಮೀರಲು ಅಂತರ್ಜಾಲದ ಪುಟಗಳನ್ನು ಬಳಸಬಹುದು. (ಉದಾಹರಣೆಗೆ ತ್ಸುರು ಅಭಿಮನ್ಯುವಿನ ಕಿರೀಟವನ್ನು ತಲೆಮೇಲಿರಿಸಿಕೊಂಡ ಫೊಟೊ, ಹಂಪಿಯ ಕಲ್ಲು ಮಂಟಪದ ಕ್ಯಾಬಿನ್ ಫೊಟೊ, ಮೊರಿಜಿರಿ, ವರಬಿಯವರ ಫೊಟೊ, ಮದ್ರಾಸ್ ವಿಶ್ವವಿದ್ಯಾಲಯದ ದಿನಗಳ ಫೊಟೊಬಿಳಿಮಲೆಯವರು ಪ್ರೀತಿಸುವ ಮೇಷ್ಟ್ರುಗಳು, ಪ್ರಭಾವಿಸಿದ 'ಬೆಟ್ಟದ ಜೀವ'ಗಳ  ಫೋಟೋಗಳು, ಗೂಗಲ್ ಮ್ಯಾಪ್ ನಲ್ಲಿ ವಾಟೆಕಜೆ, ಬಿಳಿಮಲೆ, ಕೂತ್ಕುಂಜ ಶಾಲೆ, ಏನೆಕಲ್ಲು, ಎಲಿಮಲೆ, ಕರಿಮಲೆ ಇತ್ಯಾದಿ ಪ್ರದೇಶಗಳ ಸ್ಥಳಗುರುತು, ಇತ್ಯಾದಿ.) ಇವು ಪುಸ್ತಕದ ಓದುಗರ ಭಾವಲೋಕದ ವಿಸ್ತರಣೆಗೆ ಇನ್ನಷ್ಟು ಸಹಕಾರಿಯಾಗಬಲ್ಲುದು.

ಪುಸ್ತಕದಲ್ಲಿ ಬಿಳಿಮಲೆಯವರು ತಾನು ಪ್ರೀತಿಸಿ ಮದುವೆಯಾದ, ಜಾತಿಯ ಗೋಡೆಯನ್ನೊಡೆದು ಬಂದು ಜೊತೆಗೂಡಿಕೊಂಡ ತನ್ನ ಪತ್ನಿಯ ಬಗ್ಗೆಬರೆದದ್ದು ಕಡಿಮೆ ಅನ್ನಿಸುತ್ತದೆ.  'ಹೃದಯವನ್ನು ಕೊಟ್ಟವಳು ಕಿಡ್ನಿಯನ್ನೂ ಕೊಟ್ಟಳು'  ಎಂದುದನ್ನು ಓದಿದಾಗ  'ಅಷ್ಟೇ ಸಾಕೆ?' ಎಂದು ಕೇಳಬೇಕೆನ್ನಿಸುತ್ತದೆ.

'ಪತ್ನಿಯರು ಕಂಡಂತೆ ಪ್ರಸಿದ್ಧರು' ಬರೆದ ಬಿ. ಎಸ್. ವೆಂಕಟಲಕ್ಷ್ಮಿಯವರು ಈಗಿಲ್ಲವಾದರೂ ಶೋಭನಾರವರು ಕಂಡ ಬಿಳಿಮಲೆಯವರ ಚಿತ್ರಣ ಕಾಣುವ ಕುತೂಹಲವಾಗುತ್ತದೆ.

 ಮೂಢನಂಬಿಕೆ, ಕಂದಾಚಾರಗಳ ನಡುವೆ ಬೆಳೆದ ಬಿಳಿಮಲೆಯವರು ವಿಚಾರವಾದಿಯಾಗಿ ಬೆಳೆದ ಬಗೆ  ಕುತೂಹಲ ಹುಟ್ಟಿಸುತ್ತದೆ. ಪುಸ್ತಕದಲ್ಲಿ ಬಿಳಿಮಲೆಯವರು ದೇವರು, ದೇವಮಾನವರು, ಪುನರ್ಜನ್ಮ, ಮಾಟ , ಮೋಹಿನಿ, ಜಾತಿ ಇವುಗಳ ಬಗ್ಗೆ ತಮ್ಮ ವಿಚಾರಗಳನ್ನು ಖಚಿತಪಡಿಸಿದ್ದಾರೆ ಬೆಳವಣಿಗೆ ಹೇಗಾಯಿತೆಂದು ಓದುಗರು ಸ್ವಲ್ಪ ಮಟ್ಟಿಗೆ ಊಹಿಸಬಹುದಾದರೂ ಬಿಳಿಮಲೆಯವರು ತಮ್ಮ ಬೆಳವಣಿಗೆಯ ಹಂತಗಳನ್ನು  ಸ್ವಲ್ಪ ವಿವರಿಸಿದ್ದರೆ ಯುವ ಪೀಳಿಗೆಗೆ ಅನುಕೂಲವಾಗುತ್ತಿತ್ತು ಅನ್ನಿಸುತ್ತದೆ. ಸಂಸ್ಕ್ರತಿ ಅಧ್ಯಯನ ನಡೆಸಿದ ಬಿಳಿಮಲೆಯವರು ಅದರಿಂದ ಪಡೆದ ಕಾಣ್ಕೆಗಳು ಅವರ ವಿಚಾರಧಾರೆಯನ್ನು ಬದಲಿಸುತ್ತ ಹೋದವೇ ಅಥವಾ ಅದಕ್ಕೂ ಮೊದಲೇ ವಿಚಾರಗಳು ಹುರಿಗೊಂಡಿದ್ದವೇ ಎಂಬ ಕುತೂಹಲ ಹುಟ್ಟುತ್ತದೆ.  (ನನ್ನಂತವರಿಗೆ ಕಾರಂತರಂತಹವರ ಬರಹಗಳು  ಪ್ರಭಾವಬೀರಿದ್ದವು. ಕಾರಂತರು ತಮ್ಮ ವಿಚಾರಗಳ ಬೆಳವಣಿಗೆಯ ಹಂತಗಳನ್ನು ಸೊಗಸಾಗಿ ವಿವರಿಸುತ್ತಾರೆ.) 

 ಅಮೀನಮಟ್ಟುರವರು ಬಿಳಿಮಲೆಯವರ ಬಗ್ಗೆ ಸೊಗಸಾಗಿ ಪೀಠಿಕೆ ಬರೆಯುತ್ತಾ, ‘ಕ್ರೌರ್ಯವನ್ನು ಉಂಡುಬೆಳೆದ ಬಿಳಿಮಲೆಯವರು ಎಲ್ಲವನ್ನೂ ಬಿಚ್ಚಿಡಲು ಹೋಗಿಲ್ಲ’ ಎಂದು ಹೇಳುತ್ತಾ, ಇವರಾದರೂ  ಒಂದಿಷ್ಟು ಹೆಚ್ಚು ವಿವರಗಳನ್ನು ಕೊಡಬಹುದೆಂಬ ಭರವಸೆ ಹುಟ್ಟಿಸಿ, ನಿರಾಸೆಗೊಳಿಸುತ್ತಾರೆ. ಬಹುಷಃ ಇವರಿಬ್ಬರೂ  ಯುವಜನತೆಗೆ ಕಹಿಯುಣ್ಣಿಸಿದರೆ ಸಿನಿಕತೆಯ ವೈಶಂಪಾಯನಕ್ಕೆ ತಳ್ಳಿದಂತಾಗಬಹುದೆಂದು   ಹೀಗೆ ಬಿಚ್ಚಿಡದೆ ಹೋಗುತ್ತಾರೆ ಎನ್ನಿಸುತ್ತದೆ.  ಉದ್ದುದ್ದವಾದ ವಾಕ್ಯಗಳಿಂದ ಕೂಡಿದ, ಸಂಕೀರ್ಣವಾದ ಪ್ರಕಾಶಕಿಯ  ಬರಹ, ಇವರು ಹೀಗೆ ಕೂಡಾ ಬರೆಯಬಲ್ಲರೇ ಎಂದು ಅಚ್ಚರಿ ಮೂಡಿಸುತ್ತದೆ. ಸರಳಗೊಳಿಸಿದರೆ   ಚಂದವಾಗುವುದು. 

' ಕಾಗೆ ಮುಟ್ಟಿದ ನೀರುಸಹೃದಯರಿಗೆಲ್ಲ    ಮುದ ತರಬಲ್ಲ, ವಿಚಾರಕ್ಕೆ ಹಚ್ಚುವ, ಅರಿವಿನ ಎಲ್ಲೆಯನ್ನು ಹಿಗ್ಗಿಸುವ ಕೃತಿಯಾಗಿ ಹೊರಬಂದಿದೆ. ಯುವಜನರಲ್ಲಿ ಹೊಸಹುರುಪು ಹೊಮ್ಮಿಸಬಲ್ಲ, ಮಾನವೀಯ ಸೆಲೆಗಳನ್ನು ಬತ್ತದಂತೆ ಜಿನುಗಿಸಿಕೊಂಡಿರುವ ಎಚ್ಚರವನ್ನು ಪ್ರೇರೇಪಿಸಬಲ್ಲದ್ದೂ, ಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ತುಂಬುವ ಕೃತಿಯೂ   ಆಗಿದೆ


 --$$--

1 comment:

Shyamala Madhav said...

ಅತ್ಯುತ್ತಮ ವಿಮರ್ಶೆ. ಲೇಖಕಿ, ಓದುಗ - ಇಬ್ಬರೂ ಸಾರ್ಥಕರೆನಿಸುವಂತೆ.