My teacher K.Venkat Nayak passed away on 21March2025. An event to pay tribute to him was held in Thekkatte on 03April2025. Below is my tribute to him (also contains some images of the event and audio recordings)
ಕೆ. ವೆಂಕಟ್ ನಾಯ್ಕರ ನೂರಾರು ಶಿಷ್ಯರಲ್ಲಿ ನಾನೂ ಒಬ್ಬ.
ಈಗಿನ ತಲೆಮಾರಿಗೆ ಒಂದು ಕಾಲದಲ್ಲಿ ಕೆ.ವಿ. ನಾಯ್ಕರು ಕೋಳಿಗೂಡಿನಲ್ಲಿ ಪಾಠ ಮಾಡುತ್ತಿದ್ದರು ಎಂದು ಹೇಳಿದರೆ ನಂಬುವುದು ಕಷ್ಟ. ಕೋಳಿಗೂಡಿನ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಶಿಕ್ಷಣ ಪಡೆದು ದೇಶವಿದೇಶಗಳ ಪ್ರಸಿದ್ಧ ಸಂಸ್ಥೆಗಳಲ್ಲಿ ಕೆಲಸ ಪಡೆಯುವ ಅವಕಾಶ ಪಡೆಯುವುದು ಸಾಧ್ಯವೇ ಎಂದು ಅಚ್ಚರಿಪಡಬಹುದು. ಅಂತಹ ಪವಾಡಗಳೂ ಕೆ.ವಿ.ನಾಯ್ಕರಂತಹ ಉತ್ತಮ ಶಿಕ್ಷಕರ ಶ್ರಮದಿಂದ ಸಂಭವಿಸುತ್ತವೆ. ಅವರ ಹಲವಾರು ಶಿಷ್ಯರು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದು ದೇಶವಿದೇಶಗಳಲ್ಲಿ ದುಡಿದು ಉತ್ತಮ ಸ್ಥಿತಿಯಲ್ಲಿ ಬಾಳುತ್ತಿದ್ದಾರೆ.
ನನ್ನಂತಹ ಹಲವರು ಆ ಕಾಲದಲ್ಲಿ ಹಾಗೆ ಕೋಳಿಗೂಡಿನಲ್ಲಿ ಪಾಠ ಕೇಳಿದ್ದಾರೆ! ಎಲ್ಲರೂ 'ಕೋಳಿಗೂಡಿನ ಶಾಲೆ' ಎಂದು ಕರೆಯುತ್ತಿದ್ದ ಫಿಶರೀಸ್ ಹೈಸ್ಕೂಲ್ ತೆಕ್ಕಟ್ಟೆಯಲ್ಲಿ ಮೂರು ವರ್ಷ ಕೆ.ವಿ. ನಾಯ್ಕರ ಮೂಲಕ ಗಣಿತ ಮತ್ತು ವಿಜ್ಞಾನದ ಪಾಠ ಹೇಳಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು. ನಾನು ಹೈಸ್ಕೂಲ್ ಶಿಕ್ಷಣ ಮುಗಿಸಿದ ಬಳಿಕ ಈಗ ಇರುವ ಕಟ್ಟಡಕ್ಕೆ ಹೈಸ್ಕೂಲ್ ಸ್ಥಳಾಂತರವಾಯಿತು. ಈಗ ಇರುವ ಹೈಸ್ಕೂಲ್ ಕಟ್ಟಡ ನಿರ್ಮಾಣಗೊಳ್ಳಲು ಕೆ.ವಿ.ನಾಯ್ಕರ ಪರಿಶ್ರಮ ಗುರುತರವಾದದ್ದು. ಬರೀ ಖಾಲಿ ಮೈದಾನದಂತಿದ್ದ ಆ ಜಾಗ ಬಾರ್ಕೂರಿನ ಭಂಡಾರಕೇರಿ ಮಠಕ್ಕೆ ಸೇರಿದ್ದು ಎಂದು ತಿಳಿದ ಕೆ.ವಿ.ನಾಯ್ಕರು ಆ ಮಠದ ಸ್ವಾಮಿಗಳನ್ನು ಭೇಟಿಮಾಡಿ ಹೈಸ್ಕೂಲಿಗಾಗಿ ಆ ಜಾಗ ಅತೀ ಅವಶ್ಯಕವೆಂದೂ, ತೆಕ್ಕಟ್ಟೆಯ ಸುತ್ತಮುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಆ ಜಾಗದ ದಾನದಿಂದ ಮಠದ ಬಹು ದೊಡ್ಡ ಕೊಡುಗೆಯಾಗಲಿದೆ ಎಂದು ಅವರಿಗೆ ಮನವರಿಕೆ ಮಾಡಿದ್ದರಿಂದ ಹೈಸ್ಕೂಲಿಗೆ ಆ ಜಾಗ ದೊರೆತು ಹೊಸ ಕಟ್ಟಡ ನಿರ್ಮಾಣವಾಗಿ ಬಳಿಕ ಪದವಿಪೂರ್ವ ಕಾಲೇಜು ಆಗಿ ಪರಿವರ್ತನೆಯಾಗಲೂ ಅನುವಾಯಿತು.
ಕೆ.ವಿ.ನಾಯ್ಕರು ಒಬ್ಬ ಶ್ರೇಷ್ಠ ದರ್ಜೆಯ ಅಧ್ಯಾಪಕರಾಗಿದ್ದರು. ಅವರ ಪಾಠದ ಶೈಲಿ ಆಕರ್ಷಕವಾಗಿರುತ್ತಿತ್ತು, ಕುತೂಹಲ ಹುಟ್ಟಿಸುವಂತಿರುತ್ತಿತ್ತು. ವಿಚಾರಪ್ರಚೋದಕವಾಗಿರುತ್ತಿತ್ತು. ಭೂತಪ್ರೇತಗಳ ಭಯಭೀತಿಗಳ ವಾತಾವರಣದಲ್ಲಿ ಬೆಳೆದುಬರುತ್ತಿದ್ದ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ನಿರತರಾಗಿರುತ್ತಿದ್ದರು. ನಾಚಿಕೆ ಸ್ವಭಾವದ ಹಳ್ಳಿಮಕ್ಕಳನ್ನು
ಸಭೆಗಳಲ್ಲಿ ಭಾಷಣ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಭಾಷಣ ಸ್ಪರ್ಧೆ ಏರ್ಪಡಿಸುತ್ತಿದ್ದರು. ಆದರೂ ಭಾಷಣಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು. ಒಮ್ಮೆ ಭಾಷಣ ಸ್ಪರ್ಧೆಯಲ್ಲಿ ಅವರ ಹಿರಿಮಗ ಭರತ ಮತ್ತು ನಾನು ಮಾತ್ರ ಸ್ಪರ್ಧಿಗಳಾಗಿದ್ದೆವು. ನಾನು ಒಂದೇ ವಾಕ್ಯ ಮುಗಿಸಿ ಬೆಪ್ಪುಗಟ್ಟಿ ನಿಂತಿದ್ದೆ. ಆದರೂ ಎರಡನೇ ಬಹುಮಾನ ಕೊಟ್ಟರು!
ಕೆ.ವಿ.ನಾಯ್ಕರು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿತೋರಿಸಿ ನಮ್ಮ ಅರಿವನ್ನು ವಿಸ್ತರಿಸುತ್ತಿದ್ದರು. ಜಿರಳೆ, ಕಪ್ಪೆ ಇವುಗಳ ದೇಹ ಬಗೆದು ಅಂಗಾಂಗಗಳ ಪರಿಚಯ ಮಾಡಿಸಿಕೊಡುತ್ತಿದ್ದರು. ವಿಜ್ಞಾನ ಲೋಕದಲ್ಲಿ ಸಾಧನೆಗೈದವರನ್ನು ಕರೆಸಿ ಅವರಿಂದ ಭಾಷಣ ಕೊಡಿಸುತ್ತಿದ್ದರು. ನನ್ನಂತಹ ಹಲವರಲ್ಲಿ ವಿಜ್ಞಾನ ಮತ್ತು ಗಣಿತದ ಬಗ್ಗೆ ಆಸಕ್ತಿ ಬೆಳೆಯಲು ಕಾರಣರಾಗಿದ್ದರು. ಒಮ್ಮೆ ಪಾಠ ಮಾಡುವಾಗ 'ಮೈಮೇಲೆ ದೇವರು ಬರುವ' ವಿಷಯದ ಬಗ್ಗೆ ನನ್ನ ಸಹಪಾಠಿಯೊಬ್ಬ ಕೇಳಿದಾಗ ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ತಿಳಿಸಿದರು. ಕೆಲ ದಿನಗಳ ಬಳಿಕ ಪೂಜಾ ಸ್ಥಳವೊಂದರಲ್ಲಿ ಪಾತ್ರಿಯೊಬ್ಬರ ಆವೇಶದ ಸಮಯದಲ್ಲಿ ಆ ನನ್ನ ಸಹಪಾಠಿ ಮೇಷ್ಟ್ರನ್ನು ಕರೆದು ಇದಕ್ಕೇನು ಹೇಳುತ್ತೀರಿ ಎಂದು ಎಲ್ಲರ ಏದುರಿಗೇ ಕೇಳಿದನಂತೆ. ಮೇಷ್ಟ್ರು ಮರುದಿನ ಶಾಲೆಯಲ್ಲಿ ಆತನನ್ನು ಸಮಾಧಾನಿಸುತ್ತ ' ನೀನು ಆ ಪ್ರಶ್ನೆಯನ್ನು ಅಲ್ಲಿ ಕೇಳಿ ನಾನು ಏಟು ತಿನ್ನುವ ಹಾಗೆ ಮಾಡಬೇಡ ಮಾರಾಯ. ನಾನು ಇಲ್ಲಿ ಹೇಳುವ ವಿಷಯಗಳು ಅಲ್ಲಿ ಹೇಳಲಾಗದು. ಅಲ್ಲಿಯ ಜನರ ಮನಸ್ಥಿತಿ ಬೇರೆಯಾಗಿರುತ್ತದೆ ಎಂದರು'! ವಿಜ್ಞಾನದ ಮೇಷ್ಟ್ರುಗಳು ಸಮಾಜದಲ್ಲಿ ಇಂತಹ ಸಂದಿಗ್ದತೆಗೆ ಒಳಗಾಗುವುದು ಸಾಮಾನ್ಯ. ವಿಜ್ಞಾನಿಗಳು ಶಿಕ್ಷೆಗೆ ಒಳಗಾದ ಎಷ್ಟೋ ಉದಾಹರಣೆಗಳು ಪ್ರಪಂಚದಾದ್ಯಂತ ದಾಖಲಾಗಿವೆ. . ಇದರಿಂದ ವಿಜ್ಞಾನ ತಂತ್ರಜ್ಞಾನ ಲೋಕದ ಬೆಳವಣಿಗೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಅದು ನಿರಂತರವಾಗಿ ನಮ್ಮ ಬದುಕನ್ನು ಹಸನಾಗಿಸುತ್ತಿದೆ. ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ವಿಜ್ಞಾನ ವಿಭಾಗದ ಜನಕ ಎಂದು ಪ್ರಖ್ಯಾತರಾದ ಜಾನ್ ಮೆಕಾರ್ಥಿ ಎಂಬವರು ಹೀಗೆ ಹೇಳುತ್ತಾರೆ - He who refuses to do arithmetic is doomed to talk nonsense. ಅರ್ಥಾತ್ ಜನರು ಗಣಿತದಲ್ಲಿ ಪರಿಣತಿ ಪಡೆಯದಿದ್ದಲ್ಲಿ ಅಸಂಬದ್ಧ ಹೇಳಿಕೆಗಳನ್ನು ಕೊಡಲು ಮತ್ತು ಕೆಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲಷ್ಟೇ ಸಾಧ್ಯವಾಗುತ್ತದೆ ಎಂದು. ಮನುಕುಲದ ಸವಾಲುಗಳನ್ನು ಎದುರಿಸಲು, ಅಭಿವೃದ್ಧಿ ಹೊಂದಲು ಗಣಿತ ಮತ್ತು ವಿಜ್ಞಾನದಲ್ಲಿ ಪರಿಣತಿ ಹೊಂದುವುದು ಅತೀ ಅವಶ್ಯಕ ಎನ್ನುತ್ತಾರೆ.
ಹೀಗಾಗಿ ನಮ್ಮ ಸಮಾಜಕ್ಕೆ ಉತ್ತಮ ಗಣಿತ ಮತ್ತು ವಿಜ್ಞಾನದ ಶಿಕ್ಷಕರ ಅವಶ್ಯಕತೆ ಇದೆ.
ನಮ್ಮ ಮೇಷ್ಟ್ರು ಸುತ್ತುಮುತ್ತಣ ಜನರಿಗೆಲ್ಲ ಬೇಕಾದವರಾಗಿ ಬದುಕಿದವರು. ಹಲವರಿಗೆ ಮಾರ್ಗದರ್ಶಕರಾಗಿದ್ದರು. ತೆಕ್ಕಟ್ಟೆಯ ಹೈಸ್ಕೂಲನ್ನು ತನ್ನ ಸ್ವಂತ ಮನೆಯಂತೆ ಭಾವಿಸಿ ಅದರ ಉನ್ನತಿಗಾಗಿ ಸದಾ ಶ್ರಮಿಸಿದವರು. ತನ್ನ ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯ ಹೊಂದಿರುತ್ತಿದ್ದರು. ನಮ್ಮೂರ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಉನ್ನತ ದರ್ಜೆಯದ್ದಾಗಿರಬೇಕೆಂಬುದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಉತ್ತಮ ಶಿಕ್ಷಕರನ್ನು ತೆಕ್ಕಟ್ಟೆಗೆ ಕರೆಸಿಕೊಳ್ಳಲು ಹೆಣಗುತ್ತಿದ್ದರು. ಒಮ್ಮೆ ನುರಿತ ಟೀಚರ್ ಒಬ್ಬರು ತನಗೆ ತೆಕ್ಕಟ್ಟೆ ದೂರವಾಗಿರುವುದರಿಂದ ತನ್ನ ಊರಿನ ಹತ್ತಿರದ ಶಾಲೆಗೆ ವರ್ಗಾವಣೆ ಕೋರಿಕೊಂಡಿದ್ದರಂತೆ. ಇನ್ನೇನು ವರ್ಗಾವಣೆ ಆದೇಶ ದೊರಕಿತು ಎನ್ನುವಷ್ಟರಲ್ಲಿ ಕೆ.ವಿ. ನಾಯ್ಕರು ಬಿ.ಈ.ಓ. ರನ್ನು ಸಂಪರ್ಕಿಸಿ ಇದರಿಂದ ತೆಕ್ಕಟ್ಟೆಯ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟು ವರ್ಗಾವಣೆಯನ್ನು ರದ್ದು ಮಾಡಿಸಿಕೊಂಡು ಬಂದರಂತೆ. ಮುಂದೊಮ್ಮೆ ಕೆ.ವಿ.ನಾಯ್ಕರು ಕಾಲೇಜು ಲೆಕ್ಚರರ್ ಆಗಿ ಬೇರೆಡೆಗೆ ವರ್ಗವಾದಾಗ, ಅವರ ಸ್ಥಾನಕ್ಕೆ ತೆಕ್ಕಟ್ಟೆಗೆ ಬೇರೆ ಶಿಕ್ಷಕರು ಬಾರದಿದ್ದಾಗ ವಾರಾಂತ್ಯದಲ್ಲಿ ಬಂದು ತಕ್ಕಟ್ಟೆ ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದರು! ಅಮೆರಿಕದಲ್ಲಿರುವ ನನ್ನ ತಮ್ಮ ಗಣೇಶ ಅದನ್ನು ಈಗಲೂ ನೆನೆಸಿಕೊಳ್ಳುತ್ತಾನೆ. ತೆಕ್ಕಟ್ಟೆ ಪರಿಸರದ ವಿದ್ಯಾರ್ಥಿಗಳು ಇಂತಹ ಶಿಕ್ಷಕರನ್ನು ಪಡೆದದ್ದು ಅವರ ಸೌಭಾಗ್ಯವಲ್ಲದೆ ಇನ್ನೇನು?
ನಾನು ವಿಜ್ಞಾನದ ವಿಷಯವನ್ನು ಆರಿಸಿಕೊಂಡು ಮುಂದೆ ಮೈಸೂರಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು Dr. ಅಬ್ದುಲ್ ಕಲಾಂ ನೇತೃತ್ವದಲ್ಲಿದ್ದ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ 'ವಿಜ್ಞಾನಿ' ಎಂಬ ಹುದ್ದೆ ಪಡೆದು ಡೆಹ್ರಾಡೂನ್ ನಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿದ್ದು, ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಪ್ರಥಮ ಯುದ್ಧ ಟ್ಯಾಂಕ್ ಅರ್ಜುನ್ - ಇದರ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಗಳಿಸಿದ್ದು , ಬಳಿಕ ನಾರಾಯಣ ಮೂರ್ತಿ ನೇತೃತ್ವದ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ವಿದೇಶಗಳಲ್ಲೂ ಕೆಲಸ ಮಾಡುವ ಅವಕಾಶ ಲಭಿಸಿದ್ದು - ಇವುಗಳೆಲ್ಲ ಕೆ.ವಿ.ನಾಯ್ಕರಂತಹ ಹಲವು ಶಿಕ್ಷಕರ ಶ್ರಮದ ಪರಿಣಾಮವಾಗಿ ಎಂದು ಭಾವಿಸುತ್ತೇನೆ.
ನಾನು ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಒಂದೆರಡು ಬಾರಿ ಕೆ.ವಿ.ನಾಯ್ಕರು ನನ್ನ ಅಪಾರ್ಟ್ಮೆಂಟಿಗೆ ಭೇಟಿ ಕೊಟ್ಟಿದ್ದರು. ಅವರ ಎರಡನೇ ಮಗ ಸುಮಂತನ ಮನೆ ನನ್ನ ಮನೆಗೆ ಒಂದೆರಡು ಕಿಲೋಮೀಟರು ದೂರದಲ್ಲಿ ಇತ್ತು. ಮುಂದೆ ಅವರ ಹಿರಿಮಗ ಭರತ ದುರದ್ರಷ್ಟವಷಾತ್ ಅಫಘಾನಿಸ್ತಾನ್ ನಲ್ಲಿ ತೀರಿಕೊಂಡಾಗ ಮೇಷ್ಟ್ರು ಬೆಂಗಳೂರಿನಲ್ಲೇ ಇದ್ದರು. ಸುದ್ದಿ ಕೇಳಿದ ಕೂಡಲೇ ಹೋಗಿ ಮೇಷ್ಟ್ರನ್ನು ಭೇಟಿಯಾಗಿದ್ದೆ. ದುಃಖದ ಮಡುವಿನಲ್ಲಿದ್ದ ಮೇಷ್ಟ್ರನ್ನು ನೋಡುವುದು ನನಗೆ ಕಷ್ಟವಾಗಿತ್ತು.
ಸ್ಫುರದ್ರೂಪಿಯಾಗಿದ್ದ ನಮ್ಮ ಮೇಷ್ಟ್ರನ್ನು ಇತ್ತೀಚಿನ ವರ್ಷಗಳಲ್ಲಿ ನೋಡಿದಾಗ ಕಸಿವಿಸಿಯಾಗುತ್ತಿತ್ತು. ಸೊರಗಿದ ಅವರ ದೇಹವನ್ನು ನೋಡಿದಾಗ ಕಾಲನ ನಿರ್ದಯತೆಯ ಬಗ್ಗೆ ಸಿಟ್ಟು ಬರುತ್ತಿತ್ತು. ನಮ್ಮನ್ನು ನೋಡಿದಾಗ ಅವರ ಮುಖದಲ್ಲಿ ಸೂಸುವ ಹೂನಗೆ ಮಾತ್ರ ಹಾಗೆಯೇ ಇರುತ್ತಿತ್ತು. ಅದು ನಮ್ಮನ್ನು ವಿಸ್ಮಯಗೊಳಿಸುತ್ತಿತ್ತು. ಅಳು ನುಂಗಿ ನಗುವ ಗುಣ ಅವರಲ್ಲಿತ್ತು.
ಗ್ರೀಕ್ ದೇಶದ ಪ್ರಸಿದ್ಧ ವಿಜ್ಞಾನಿ ಅರ್ಕಿಮಿಡೀಸ್ ಒಂದು ಸನ್ನೆಗೋಲಿನಿಂದ ಭೂಮಿಯನ್ನೇ ಎತ್ತಬಲ್ಲೆ ಎಂದಿದ್ದ. ಕೆ.ವಿ.ನಾಯ್ಕರು ತಮ್ಮ ಗಣಿತ-ವಿಜ್ಞಾನದ ಕುರಿತ ಜ್ಞಾನದ ಸನ್ನೆಗೋಲಿನಿಂದ ನಮ್ಮನ್ನೆಲ್ಲ ಮೇಲೆತ್ತಲು ಪ್ರಯತ್ನಿಸಿದವರು. ಕೆ.ವಿ.ನಾಯ್ಕರು ತಮ್ಮ ಜೀವಿತದ ಬಹುಪಾಲು ಸಮಯವನ್ನು ತೆಕ್ಕಟ್ಟೆ ಹೈಸ್ಕೂಲ್ ನ ಅಭಿವೃದ್ಧಿಗಾಗಿ ತೇದಿದ್ದಾರೆ.
ಜ್ಞಾನದೀವಿಗೆಯ ಹಚ್ಚಿ ಹಲವರ ಬದುಕನ್ನು ರೂಪಿಸುವಲ್ಲಿ ನೆರವಾದ ನಮ್ಮ ಮೇಷ್ಟ್ರು ನಮ್ಮ ನೆನಪಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತಾರೆ.
ಕೆ.ವಿ. ನಾಯ್ಕರ ಶಿಸ್ತಿನ ಬದುಕು , ಅವರ ಧೋರಣೆಗಳು, ಅವರ ಭೋದನೆಗಳು ನಮ್ಮ ಮುಂದಿನ ಪೀಳಿಗೆಗಳಿಗೂ ಸ್ಪೂರ್ತಿದಾಯಕವಾಗಿರುತ್ತವೆ ಮತ್ತು ನಮ್ಮನ್ನು ಸನ್ನಡತೆಯ , ಸುಜ್ಞಾನದ ಹಾದಿಯಲ್ಲಿ ಕೈಹಿಡಿದು ಸದಾಕಾಲ ಮುನ್ನಡೆಸುತ್ತಿರುತ್ತವೆ ಎಂದುಕೊಳ್ಳುತ್ತೇನೆ.
ನಮಸ್ಕಾರ.
ದಿನೇಶ
_______________
Speeches (Audio only)
Malyadi Shivaram Shetty Speech
Dinesh K Shetty Tekkatte Speech
No comments:
Post a Comment