My friend Krishna Karanth passed away unexpectedly on 14Aug2024 (at the age of 61 years)
Here is my tribute.
ಕೃಷ್ಣ ಕಾರಂತರಿಗೆ
ನಮನ
ನನ್ನ ಜೀವನದಲ್ಲಿ 3 ಜನ ಕಾರಂತರು ಪ್ರಭಾವ ಬೀರಿದ್ದಾರೆ. ಎಳವೆಯಲ್ಲಿಯೇ
ಶಿವರಾಮ ಕಾರಂತರ ಬರವಣಿಗೆ ನನ್ನ ಬದುಕಿನ ದ್ರಷ್ಟಿಕೋನವನ್ನೇ ಬದಲಾಯಿಸಿಬಿಟ್ಟಿತ್ತು. ನನ್ನ
ಹೈಸ್ಕೂಲ್ ದಿನಗಳಲ್ಲಿ ನಮ್ಮೂರ ದೇವಸ್ಥಾನದ ಧ್ವನಿವರ್ಧಕದ ಮೂಲಕ ಬಿ.ವಿ.ಕಾರಂತರ ದನಿಯಲ್ಲಿ ತೂರಿಬರುತ್ತಿದ್ದ ಪುರಂದರದಾಸರ ಹಾಡುಗಳು ನನ್ನನ್ನು
ಆಕರ್ಷಿಸಿದ್ದವು. ಬಳಿಕ ಬಿ.ವಿ.ಕಾರಂತರ ಸಿನಿಮಾ, ರಂಗಗೀತೆಗಳು ಮತ್ತು ನಾಟಕಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು. ನನ್ನ ಮೇಲೆ ಪ್ರಭಾವ
ಬೀರಿದ ಇನ್ನೊಬ್ಬ ಕಾರಂತರು ಕೃಷ್ಣ ಕಾರಂತರು.
ಕೃಷ್ಣ ಕಾರಂತರ
ಪರಿಚಯವಾದದ್ದು ಈ ಶತಮಾನದ ಆದಿಯಲ್ಲಿ,ನನ್ನ ತಮ್ಮ ಗಣೇಶನ
ಮೂಲಕ. ಅವರು ಮತ್ತು ನನ್ನ ತಮ್ಮ ಅಮೆರಿಕೆಯಲ್ಲಿ ಸಹೋದ್ಯೋಗಿಗಳಾಗಿದ್ದರು. ನನ್ನ ಸಹಪಾಠಿಯೊಬ್ಬನ
ಮನೆ ಮಾರಾಟಕ್ಕಿದೆಯೆಂದು ತಿಳಿದಾಗ ಆ ವಿಷಯವನ್ನು ನನ್ನ ತಮ್ಮನಿಗೆ ತಿಳಿಸಿದ್ದೆ. ಅವನು ಕೃಷ್ಣ
ಕಾರಂತರಿಗೆ ತಿಳಿಸಿದ ಬಳಿಕ ಕೃಷ್ಣ ಕಾರಂತರು ಅದನ್ನು ಖರೀದಿಸಿದರು. ಬೆಂಗಳೂರಿನ
ಜೆ.ಪಿ.ನಗರದಲ್ಲಿನ ಆ ಮನೆಗೆ ಗ್ರಹಪ್ರವೇಶಕ್ಕೆ ಆಮಂತ್ರಿಸಿದ್ದರು. ಕೆಲವು ವರ್ಶಗಳ ಬಳಿಕ ಅವರ
ಮಗನ ಉಪನಯನಕ್ಕೂ ಕರೆದಿದ್ದರು. ಆಗ ನನ್ನ ಸಹಪಾಠಿಯೊಬ್ಬ ಕಾರಂತರ ಸಹೋದ್ಯೋಗಿಯೆಂದು ತಿಳಿಯಿತು.
ಕೆಲವು ವರ್ಷಗಳ ಬಳಿಕ ನಾನು ಕೆಲಸ ಮಾಡುತ್ತಿದ್ದ ಚಾರಿಟಿ ಸಂಸ್ಥೆಯೊಂದರ ಕಚೇರಿ ಅವರ ಮನೆಯ ಪಕ್ಕದ
ಕಟ್ಟಡಕ್ಕೆ ವರ್ಗಗೊಂಡಾಗ ಕಾರಂತರ ಮನೆಗೆ ಆಗಾಗ್ಗೆ ಭೇಟಿಕೊಟ್ಟು ಹರಟೆಹೊಡೆದುಕೊಂಡು ಊಟಮಾಡಿ
ಹೋಗುವುದು ರೂಢಿಯಾಗತೊಡಗಿತ್ತು. ನಮ್ಮ ಚಾರಿಟಿ ಸಂಸ್ಥೆ ನಡೆಸುವ ಸ್ಲಂ ಮಕ್ಕಳಿಗಾಗಿಯೇ ಇದ್ದ
ಶಾಲೆಯ ಕಂಪ್ಯೂಟರ್ಗಳು ಹಾಳಾಗಿರುವುದನ್ನು ಅವರಿಗೆ ತಿಳಿಸಿದಾಗ ಅದನ್ನು ರಿಪೇರ್ ಮಾಡಿ ಕೊಡಲು
ಮುಂದೆ ಬಂದರು. ಕಾಲೇಜಿಗೆ ಹೋಗುತ್ತಿದ್ದ ಅವರ ಕಿರಿಯ ಮಗನೊಡನೆ ಸೇರಿಕೊಂಡು ಸುಮಾರು ೨೦-೩೦
ಕಂಪ್ಯೂಟರ್ಗಳನ್ನು ಹಗಲು ರಾತ್ರಿ ಕೆಲಸ ಮಾಡಿ ಪುಕ್ಕಟೆಯಾಗಿ ರಿಪೇರ್ ಮಾಡಿ ಕೊಟ್ಟರು. ಕೆಲವೊಮ್ಮೆ ಅದಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಅವರ
ಖರ್ಚಿನಲ್ಲೇ ತಂದು ಹಾಕಿದ್ದುಂಟು. ಅವರ ಫಿಲೊಸೊಫಿ ಏನಿತ್ತೆಂದರೆ ವಸ್ತು ಹಳತಾದ ತಕ್ಷಣ ಎಸೆದು
ಬಿಡಬಾರದು. ಅದರ ಮರುಪಯೋಗ ಮಾಡಲು ಸಾಧ್ಯ ಎಂದಾದರೆ ಆ ಪ್ರಯತ್ನ ಮಾಡಬೇಕು. ಈ ಎಸೆಯುವ ಸಂಸ್ಕೃತಿ
ಪರಿಸರಕ್ಕೆ ಹಾನಿ ಮಾತ್ರವಲ್ಲದೆ ಅದನ್ನು ತಯಾರಿಸಲು ಪಟ್ಟವರ ಶ್ರಮಕ್ಕೆ ಅಗೌರವ ತೋರಿದಂತೆ
ಎನ್ನುತ್ತಿದ್ದರು. ಅವರ ಪರೀಕ್ಷಕ ಗುಣ ಅಸಾಧಾರಣವಾದದ್ದು. ಎಂಭತ್ತರ ದಶಕದ ಆದಿ ಭಾಗದಲ್ಲಿ
ಇಂಜಿನಿಯರಿಂಗ್ ಮಾಡಿ ಬಳಿಕ ಮದ್ರಾಸ್ IIT ನಲ್ಲಿ ಎಂಟೆಕ್ ಮಾಡಿದ್ದ ಕಾರಂತರು ಬಹಳ ಶ್ರಮಜೀವಿಯಾಗಿದ್ದು ಅಲ್ಲ್ರೌಂಡರ್ ವರ್ಗಕ್ಕೆ
ಸೇರಿದವರು. ಯಾವ ಕೆಲಸಕ್ಕೂ ಹಿಂಜರಿಯುವವರಲ್ಲ. ಎಲ್ಲ ವಿಷಯಗಳ ಬಗ್ಗೆ ಕುತೂಹಲವಿದ್ದವರು. ಆ ಕೆಲಸ
ಮೇಲು, ಈ ಕೆಲಸ ಕೀಳು ಎಂಬ ಭಾವನೆ ಅವರಲ್ಲಿ ಇದ್ದಿರಲಿಲ್ಲ .
ಎಲೆಕ್ಟ್ರಾನಿಕ್ಸ್ ಪಂಡಿತರಾದ ಕಾರಂತರು ತೆಂಗಿನ ಗರಿಯ ಮಡಲು ಹೆಣೆಯಲು ಬಲ್ಲರು, ಗಾರೆ ಕೆಲಸವೂ ಬಲ್ಲರು, ಮರದ ಕೆಲಸವೂ ಬಲ್ಲರು, ಆವೆ ಮಣ್ಣಿನ ಹೊಗೆ ಉಗುಳದ ಒಲೆ ಮಾಡಲೂ ಬಲ್ಲರು, ತೋಟಗಾರಿಕೆಯೂ ಬಲ್ಲರು. ಮನುಷ್ಯರೊಡನೆ ಭೇದಭಾವ ತೋರದವರು. ಜಾತಿ,ಮತ,ದೇಶ ಮೀರಿದ
ದಾರ್ಶನಿಕರಂತಿದ್ದರು. ಜನರ ಕಷ್ಟಸುಖಗಳಿಗೆ ಮಿಡಿಯುವವರಾಗಿದ್ದರು, ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿಯುಳ್ಳವರು, ಎಲ್ಲಾದರೂ ಗಾಯಗೊಂಡವು ಸಿಕ್ಕಿದರೆ ತಂದು ಆರೈಕೆ
ಮಾಡುತ್ತಿದ್ದರು. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರ ಬಗ್ಗೆಯೂ ಕಾಳಜಿ ತೋರುವವರಾಗಿದ್ದರು. ಅವರ
ಕಷ್ಟಕ್ಕೆ ಸ್ಪಂದಿಸಿ ತಕ್ಷಣಕ್ಕೆ ಹಿಂಜರಿಯದೆ ಸಹಾಯ ಮಾಡಲು ಮುಂದಾಗುತ್ತಿದ್ದರು.
ಅದಾವ ದುಶ್ಚಟಕ್ಕೂ
ದಾಸರಾಗದವರು. ಅವರೊಬ್ಬ ಕರ್ಮಯೋಗಿ. ಕಾಯಕವೇ ಕೈಲಾಸವೆಂದುಕೊಂಡು ಬಾಳಿದವರು. ಗುರುಗಳ ಬಗ್ಗೆ
ಅಪಾರ ಗೌರವ ತೋರುತ್ತಿದ್ದರು. ನನ್ನ ಕಾಲೇಜಿನ ಪ್ರಾಂಶುಪಾಲರು ಅವರಿಗೂ ಗುರುಗಳಾಗಿದ್ದರು. ಅವರ
ಮೆಚ್ಚಿನ ಶಿಷ್ಯರಾಗಿದ್ದರು ಕಾರಂತರು. ಅವರೊಬ್ಬ ಉತ್ತಮ ಶಿಕ್ಷಕರಾಗಬಲ್ಲವರಾಗಿದ್ದರು. ಅವರ
ಮಕ್ಕಳಿಗೆ 'ನೋಡಿ ಕಲಿ, ಮಾಡಿ ತಿಳಿ' ಎಂಬ ತತ್ವದಂತೆ ತಾವೇ
ಪ್ರಯೋಗಗಳನ್ನು ಮಾಡಿ ಕಲಿಯಲು ಪ್ರೋತ್ಸಾಹಿಸುತ್ತಿದ್ದರು.
ಕೆಲವೊಮ್ಮೆ ಅನ್ನಿಸುತ್ತಿತ್ತು ನನಗೆ - ಶಿವರಾಮ ಕಾರಂತರೇನಾದರೂ
ನಮ್ಮ ಕೃಷ್ಣ ಕಾರಂತರ ಒಡನಾಟ ಮಾಡಿದ್ದರೆ ಇನ್ನೊಂದು 'ಬೆಟ್ಟದ ಜೀವ' ಕಾದಂಬರಿಯನ್ನೇ
ಬೆರೆಯುತ್ತಿದ್ದರೋ ಏನೋ ಎಂದು!
ಕಲೆ ಸಾಹಿತ್ಯ ಸಂಗೀತ
ನಾಟಕಗಳ ಬಗ್ಗೆ ಆಸಕ್ತಿಯುಳ್ಳವರಾಗಿದ್ದರು ಕೃಷ್ಣ ಕಾರಂತರು.
ನಮ್ಮ ಕಚೇರಿಯಲ್ಲಿ ನಾವು ನಡೆಸುತ್ತಿದ್ದ ಕಥಾವಳಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು.
ನನ್ನೊಂದಿಗೆ ಹಲವು ನಾಟಕಗಳಿಗೆ, ಸಾಹಿತ್ಯ
ಸಮಾರಂಭಗಳಿಗೆ ಬಂದಿದ್ದರು. ಮೊನ್ನೆಯಷ್ಟೇ ಸಂಸಾರ ಸಮೇತ ನನ್ನೊಡನೆ ರವೀಂದ್ರ ಕಲಾಕ್ಷೇತ್ರಕ್ಕೆ
"ಜೊತೆಗಿರುವನು ಚಂದಿರ" ನಾಟಕಕ್ಕೆ ಬಂದು ಖುಷಿಪಟ್ಟಿದ್ಸರು.
ಕಳೆದೆರಡು ವರ್ಷಗಳ ಸ್ವಾತಂತ್ರ್ಯ ಉತ್ಸವದ ಕಾರ್ಯಕ್ರಮಕ್ಕೆ ನಮ್ಮ ಸ್ಲಂ ಮಕ್ಕಳ ಶಾಲೆಗೆ ಹಾಜರಾಗಿದ್ದರು. ಆ ಮಕ್ಕಳು
ಬಣ್ಣದ ಕಾಗದದಲ್ಲಿ ಅವರಿಗಾಗಿ ತಯಾರಿಸಿದ್ದ ಆಮಂತ್ರಣ
ಪತ್ರ ನೋಡಿ ಖುಷಿಪಟ್ಟಿದ್ದರು, ಜೋಪಾನವಾಗಿ
ಇರಿಸಿಕೊಂಡಿದ್ದರು. ನಮ್ಮ ಮಕ್ಕಳು
ಬ್ಯಾಂಡ್ ಬಾರಿಸಿಕೊಂಡು ಅವರನ್ನು ಮೆರವಣಿಗೆಯಲ್ಲಿ ಕರೆತಂದಿದ್ದರು. ಕಾರಂತರು ಮುಜುಗರಗೊಂಡರೂ ಆ
ಮಕ್ಕಳೊಡನೆ ಮಗುವಿನಂತೆ ಖುಷಿಪಟ್ಟಿದ್ದರು.
ಈಗ
ಹಳಹಳಿಸುತ್ತಿದ್ದೇನೆ - ಅದು ಹೇಗೆ ಕಾರಂತರಿಗೆ
ಮನಸ್ಸು ಬಂದಿತೋ ಈ ಬಾರಿಯ ಸ್ವಂತಂತ್ರ್ಯೋತ್ಸವಕ್ಕೆ ಒಂದು ದಿನ ಮುಂಚೆಯೇ ಇರುವುದೆಲ್ಲವ ಬಿಟ್ಟು ಹೊರಟು ಹೋಗಲು. ಸ್ವಸ್ತಿಕಾ ಕಾರಂತರ
ಬಾಳ ಚಂದಿರ ಹೀಗೆ ಹಠಾತ್ತನೆ ಮರೆಯಾಗಿದ್ದು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.
ಅವರ ನೆನಪಿನ ಬತ್ತಿಯ
ಬೆಳಕು ಅವರ ಪತ್ನಿ ಮತ್ತು ಮಕ್ಕಳಾದ ಕಾರ್ತಿಕ್ ಮತ್ತು ಪ್ರತೀಕ- ರನ್ನು ಮತ್ತು ನಮ್ಮೆಲ್ಲರನ್ನು ಬಹುಕಾಲ ಬೆಚ್ಚಗಿಟ್ಟಿರುತ್ತದೆ, ಕೈ ಹಿಡಿದು ಮುನ್ನಡೆಸುತ್ತದೆ ಎಂದು ಬಲವಾಗಿ
ನಂಬಿದ್ದೇನೆ.
ನಮಸ್ಕಾರ.
No comments:
Post a Comment